ವಿಭಿನ್ನ ಕಥಾಹಂದರ ಹೊಂದಿರುವ “ಮಾಂಕ್ ದಿ ಯಂಗ್” ಚಿತ್ರದಿಂದ “ಮಾಯೆ” ಎಂಬ ಮನಮೋಹಕ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪ್ರತಾಪ್ ಭಟ್ ಬರೆದಿರುವ ಈ ಹಾಡನ್ನು ಸಿರಿ ಕಟ್ಟೆ ಹಾಡಿದ್ದು, ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ. “ಮಾಯೆ” ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಎನ್ ಜಿ ಓ ಉಷಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಆರಂಭದಿಂದಲೂ ನಮ್ಮ ಚಿತ್ರಕ್ಕೆ ಮಾಧ್ಯಮದ ಮಿತ್ರರು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾವು ಚಿರ ಋಣಿ. ಇಂದು ನಮ್ಮ ಚಿತ್ರದ “ಮಾಯೆ” ಹಾಡು ಬಿಡುಗಡೆಯಾಗಿದೆ. ಮುಂದಿನ ತಿಂಗಳು ಫೆಬ್ರವರಿ ಮಧ್ಯ ಅಥವಾ ಕೊನೆವಾರದಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡುತ್ತಿದ್ದಾರೆ. ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಪ್ಯಾನ್ ಇಂಡಿಯಾ ಮೂವೀ ಆಗಿದೆ. ಏಕೆಂದರೆ ಈ ಚಿತ್ರಕ್ಕೆ ನಾವು ಐದು ಜನ ನಿರ್ಮಾಪಕರು. ಐದು ಜನರು ಬೇರೆಬೇರೆ ರಾಜ್ಯದವರು ಎಂದು ನಿರ್ಮಾಪಕರಾದ ಕರ್ನಲ್ ರಾಜೇಂದ್ರನ್, ಗೋಪಿಚಂದ್ ಹಾಗೂ ಲಾಲ್ ಚಂದ್ ಖತಾರ್ ತಿಳಿಸಿದರು. ಇವರೊಟ್ಟಿಗೆ ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳ ಹಾಗೂ ಸರೋವರ್ ಅವರು ಸಹ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.
“ಮಾಂಕ್ ದಿ ಯಂಗ್” ವಿಂಟೇಜ್ ಫ್ಯಾಂಟಸಿ ಜಾನರ್ನ ಕಥಾಹಂದರ ಹೊಂದಿರುವ ಚಿತ್ರ. 1869 ನೇ ಇಸವಿಯಿಂದ ಚಿತ್ರದ ಕಥೆ ಆರಂಭವಾಗುತ್ತದೆ. ವಿವಿಧ ಕಾಲಘಟ್ಟಗಳ ಕಥೆಯನ್ನು ಇದರಲ್ಲಿ ತೋರಿಸಲಾಗಿದೆ. ಪ್ರೇಕ್ಷಕ ಸ್ವಲ್ಪ ಯೋಚಿಸಿದಾಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ನಿರ್ದೇಶಕ ಮಾಸ್ಚಿತ್ ಸೂರ್ಯ ತಿಳಿಸಿದರು.
ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ “ಮಾಂಕ್ ದಿ ಯಂಗ್” ಚಿತ್ರದಲ್ಲಿ ನನ್ನ ಪಾತ್ರ ವಿಶೇಷವಾಗಿದೆ. ನನ್ನ ಪಾತ್ರ ಹಾಗೂ ಚಿತ್ರ ಎರಡು ಎಲ್ಲರಿಗೂ ಮೆಚ್ಚುಗೆಯಾಗುತ್ತದೆ ಎಂಬ ಭರವಸೆ ಇದೆ ಎಂದು ಚಿತ್ರದ ನಾಯಕ ಸರೋವರ್ ಹೇಳಿದರು.
ನಾಯಕಿ ಸೌಂದರ್ಯ ಗೌಡ, ಛಾಯಾಗ್ರಾಹಕ ಕಾರ್ತಿಕ್ ಶರ್ಮ, ಸಂಗೀತ ನಿರ್ದೇಶಕ ಸ್ವಾಮಿನಾಥನ್, ಗಾಯಕಿ ಸಿರಿ ಕಟ್ಟೆ, ಗಾಯಕ ರೋಹಿತ್, ಗೀತರಚನೆಕಾರ ಪ್ರತಾಪ್ ಭಟ್, ಕಲಾವಿದರಾದ ಕೃತಿ, ರವಿ ಶಂಕರ್, ಸಾರಸ್ ಮಂಜುನಾಥ್, ರವಿ ಮಟ್ಟಿ, ಸುಮಂತ್, ಶಿವಪ್ಪ ಮುಂತಾದವರು “ಮಾಂಕ್ ದಿ ಯಂಗ್” ಚಿತ್ರದ ಕುರಿತು ಮಾತನಾಡಿದರು.
ಇದನ್ನೂ ಓದಿ : ಹಾವೇರಿ ಶಹರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ – 16 ಮೋಟಾರ್ ಬೈಕ್ಗಳು ಜಪ್ತಿ..!