ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮೂವರ ಬರ್ಬರ ಹತ್ಯೆ ನಡೆದಿದೆ. ಜಾಲಹಳ್ಳಿ ಕ್ರಾಸ್ ಬಳಿ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಲಾಗಿದೆ. ಪತ್ನಿಯ ಶೀಲ ಶಂಕಿಸಿ ಗಂಗರಾಜು ಎಂಬಾತ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಪತ್ನಿ ಭಾಗ್ಯಮ್ಮ, 19 ವರ್ಷದ ಮಗಳು ನವ್ಯಾ, 22 ವರ್ಷದ ಮಗಳು ಹೇಮಾವತಿ ಮೃತ ದುರ್ದೈವಿಗಳು.
ಆರೋಪಿ ಗಂಗರಾಜು ಬೆಂಗಳೂರಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು ಪತ್ನಿ ಭಾಗ್ಯಮ್ಮ ಅವರ ಶೀಲ ಶಂಕಿಸಿ ಆಗಾಗ ಗಲಾಟೆ ಮಾಡುತ್ತಿದ್ದನು. ಮನೆಯಲ್ಲಿ ಇಂದು ಕೂಡ ಪತ್ನಿ ಶೀಲದ ವಿಚಾರದಲ್ಲಿ ಗಂಗರಾಜು ಮತ್ತೆ ಗಲಾಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಭಾಗ್ಯಮ್ಮ ಹಾಗೂ ಇಬ್ಬರು ಮಕ್ಕಳಾದ ನವ್ಯಾ, ಹೇಮಾವತಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.
ಮೂವರನ್ನು ಕೊಲೆ ಮಾಡಿ ಮಚ್ಚಿನ ಸಮೇತ ಆರೋಪಿ ಗಂಗರಾಜು ಪೀಣ್ಯ ಪೊಲೀಸ್ ಠಾಣೆಗೆ ಬಂದಿದ್ದಾನೆ. ಪೊಲೀಸರ ಮುಂದೆ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸ್ಥಳಕ್ಕೆ ಪೀಣ್ಯ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಗಂಗರಾಜು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ – ಪರಾರಿಯಾಗಿದ್ದ ಫ್ರೆಂಡ್ ಕೊನೆಗೂ ಅರೆಸ್ಟ್!