ಚಿಕ್ಕಮಗಳೂರು : ರಾಜ್ಯದಲ್ಲಿ ಸಾಕೇತ್ ರಾಜನ್ ಕಾಲದಲ್ಲಿ ಉತ್ತುಂಗದಲ್ಲಿದ್ದ ನಕ್ಸಲ್ ಚಳವಳಿ ಶೀಘ್ರವಾಗಿ ಅಂತ್ಯವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ನಕ್ಸಲ್ ನಾಯಕ ವಿಕ್ರಂಗೌಡ ಪೊಲೀಸರ ಎನ್ಕೌಂಟರ್ನಲ್ಲಿ ಬಲಿಯಾದ ಬೆನ್ನಲ್ಲೇ ಮಹತ್ವದ ಬೆಳವಣಿಗೆಗಳು ನಡೆದಿವೆ. ರಾಜ್ಯದಲ್ಲಿ ಆ್ಯಕ್ಟೀವ್ ಆಗಿರುವ 6 ಮಂದಿ ನಕ್ಸಲರು ಶರಣಾಗತಿಗೆ ಮುಂದಾಗಿದ್ದು ನಾಳೆಯೇ 6 ಮಂದಿ ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಲಿದ್ದಾರೆ.
ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ಮಂದಿ ನಕ್ಸಲರು ಶರಣಾಗಲು ಮುಹೂರ್ತ ಫಿಕ್ಸ್ ಆಗಿದೆ. ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ ಪ್ರಮುಖರು ಸರೆಂಡರ್ ಆಗಲಿದ್ದಾರೆ. ಮುಂಡಗಾರು ಲತಾ, ವನಜಾಕ್ಷಿ, ಸುಂದರಿ, ಮಾರಪ್ಪ ಅರೋಲಿ, ವಸಂತ, ಜೀಶಾ ಸೇರಿ ಆರು ಜನ ನಕ್ಸಲರು ಸಮಾಜದ ಮುಖ್ಯ ವಾಹಿನಿಗೆ ಬರಲಿದ್ದಾರೆ.
ಮಾಜಿ ನಕ್ಸಲರಾದ ನೂರ್ ಜುಲ್ಫಿಕರ್ ಶ್ರೀಧರ್ ನೇತೃತ್ವದಲ್ಲಿ ನಕ್ಸಲರ ಶರಣಾಗತಿ ಪ್ರಕ್ರಿಯೆ ನಡೆಯಲಿದೆ. ಶರಣಾಗತಿಗೂ ಮುನ್ನ ನಕ್ಸಲರು ತಮ್ಮ ಕಟ್ಟಕಡೆಯ ಮೀಟಿಂಗ್ ನಡೆಸಿದ್ದು BTV ವಾಹಿನಿಗೆ ನಕ್ಸಲರು ಕಾಡಿನಲ್ಲಿ ನಡೆಸಿದ ಕೊನೆಯ ಮೀಟಿಂಗ್ನ EXCLUSIVE ದೃಶ್ಯಗಳು ಲಭ್ಯವಾಗಿವೆ. ನಕ್ಸಲರು ಕಾಡಿನಿಂದ ಮಹತ್ವದ ಸಭೆ ಮುಗಿಸಿಕೊಂಡು ಚಿಕ್ಕಮಗಳೂರು IB ಯತ್ತ ಹೊರಟಿದ್ದಾರೆ ಎನ್ನಲಾಗಿದೆ.
ನಕ್ಸಲರ ಶರಣಾಗತಿಗೆಂದೇ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಚನೆ ಮಾಡಿರುವ ಜಿಲ್ಲಾ ಕಮಟಿ ಮುಂದೆ ನಾಳೆ 6 ಮಂದಿ ನಕ್ಸಲರು ಶರಣಾಗಲಿದ್ದಾರೆ. ಶಾಂತಿಗಾಗಿ ನಾಗರೀಕ ವೇದಿಕೆಯ ಅಡಿಯಲ್ಲಿ ನಕ್ಸಲರು ಶರಣಾಗತಿ ಆಗಲಿದ್ದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಮುಂದೆ ಸರೆಂಡರ್ ಆಗಲಿದ್ದಾರೆ.
ಈ ಮೂಲಕ ದಶಕಗಳ ಕಾಲ ರಾಜ್ಯದಲ್ಲಿ ಅದರಲ್ಲೂ ಮಲೆನಾಡು ಭಾಗದಲ್ಲಿ ತೀವ್ರವಾಗಿದ್ದ ನಕ್ಸಲ್ ಹೋರಾಟಕ್ಕೆ ನಾಳೆಯೇ ಬಹುತೇಕ ತೆರೆ ಬಿದ್ದಂತಾಗಲಿದೆ. ಸಮಾಜದಲ್ಲಿ ಸಮಾನತೆ, ಅರಣ್ಯ ವಾಸಿಗಳ ಬದುಕಿಗಾಗಿ ಹೋರಾಟ, ಆದಿವಾಸಿಗಳಿಗೆ ದಕ್ಕಬೇಕಾದ ಹಕ್ಕುಗಳು, ಅರಣ್ಯ ನಾಶ, ಒಕ್ಕಲೆಬ್ಬಿಸುವಿಕೆ ವಿರುದ್ಧ ಹೋರಾಟ ಸೇರಿ ಸಮ ಸಮಾಜದ ನಿರ್ಮಾಣಕ್ಕೆ ಕನಸು ಹೊತ್ತ ನಕ್ಸಲರ ಹೋರಾಟ ನಾಳೆ ಅಂತ್ಯವಾಗಲಿದೆ.
ಇದನ್ನೂ ಓದಿ : ನಡುರಾತ್ರಿ ರಸ್ತೆಯಲ್ಲೇ ಕಂದಮ್ಮನ ಬಿಟ್ಟು ಹೋದ ಮಹಿಳೆ – ಮೈಕೊರೆವ ಚಳಿಗೆ ಮಗು ದುರಂತ ಅಂತ್ಯ..!