Download Our App

Follow us

Home » ಸಿನಿಮಾ » ಧರ್ಮ ಕೀರ್ತಿರಾಜ್ ಅಭಿನಯದ ‘ತಲ್ವಾರ್’ ಮೊದಲ ಹಾಡು ರಿಲೀಸ್!

ಧರ್ಮ ಕೀರ್ತಿರಾಜ್ ಅಭಿನಯದ ‘ತಲ್ವಾರ್’ ಮೊದಲ ಹಾಡು ರಿಲೀಸ್!

ಬೆಂಗಳೂರು : ನಟ ಧರ್ಮ ಕೀರ್ತಿರಾಜ್ ಅವರು ನಾಯಕನಾಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ‘ತಲ್ವಾರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿಂದೆ ಮುಮ್ತಾಜ್ ಎಂಬ ಚಿತ್ರ ನಿರ್ದೇಶಿಸಿದ್ದ ಮುರಳಿ ಅವರ ಸಾರಥ್ಯದಲ್ಲಿ ತಲ್ವಾರ್ ಸಿನಿಮಾ ಮೂಡಿ ಬಂದಿದ್ದು ಜನವರಿ ತಿಂಗಳ ಕೊನೆಯ ವಾರದಲ್ಲಿ ತೆರೆ ಮೇಲೆ ತಲ್ವಾರ್ ಅಬ್ಬರಿಸಲಿದೆ.

ಇತ್ತೀಚೆಗೆ ‘ತಲ್ವಾರ್’ ಸಿನಿಮಾದ ಮೇಕಿಂಗ್ ವಿಡಿಯೋ ಹಾಗೂ ಮೊದಲ ಹಾಡನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮಾಸ್ ಕಂಟೆಂಟ್ ಒಳಗೊಂಡಿರುವ ಈ ಚಿತ್ರದ ‘ಪಲ್ ಮರುಕಳಿಸಿತೇನೋ..’ ಎಂಬ ಮಧುರ ಗೀತೆ ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸಾಗಿದೆ.

ಟಚ್ ಸ್ಟೋನ್ ಪಿಕ್ಚರ್ಸ್ ಬ್ಯಾನರ್‌ ಅಡಿಯಲ್ಲಿ ‘ತಲ್ವಾರ್’ ಚಿತ್ರವನ್ನು ಸುರೇಶ್ ಭೈರಸಂದ್ರ ಅವರು ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಹೆಸರು ಮಾಡಿರುವ ಸುರೇಶ್ ಬೈರಸಂದ್ರ ಮೊದಲ ಬಾರಿಗೆ ನಿರ್ಮಾಪಕರಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮುರಳಿ ಅವರೇ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.

ಹಾಡು ಬಿಡುಗಡೆ ಬಳಿಕ ಮಾತನಾಡಿದ ನಾಯ ಕನಟ ಧರ್ಮ ಕೀರ್ತಿರಾಜ್ ಅವರು, ಇದೊಂದು ಆ್ಯಕ್ಷನ್ ಹಾಗೂ ಮದರ್ ಸೆಂಟಿಮೆಂಟ್ ಕಥೆ ಒಳಗೊಂಡ ಚಿತ್ರ. ಇದರಲ್ಲಿ ನನ್ನ ಗೆಟಪ್ ಬೇರೆ ಥರ ಇರುತ್ತದೆ. ನನಗಿದು ಸ್ಪೆಷಲ್ ಸಿನಿಮಾ. ದುಡ್ಡಿಗಾಗಿ ಏನನ್ನಾದರೂ ಮಾಡಲು ಸಿದ್ದವಾಗಿರೋ ಹುಡುಗನ ಪಾತ್ರ ನನ್ನದು. ಆನಂತರ ಆತನಿಗೆ ಪಶ್ಚಾತ್ತಾಪವಾಗಿ ಏನು ಮಾಡುತ್ತಾನೆ ಎಂಬುದನ್ನು ತಲ್ವಾರ್ ಸಿನಿಮಾ ಮೂಲಕ ಹೇಳಿದ್ದೇವೆ ಎಂದರು.

ತಲ್ವಾರ್ ಸಿನಿಮಾ ನಿರ್ದೇಶಕ ಮುರಳಿ ಮಾತನಾಡಿ, ನನಗೆ ಚಿತ್ರರಂಗದಲ್ಲಿ ಮೂರು ಜನ ಗುರುಗಳಿದ್ದಾರೆ. ನಿರ್ದೇಶಕ ದಿನೇಶ್ ಬಾಬು, ಉಮೇಶ್ ಬಣಕಾರ್ ಹಾಗೂ ಛಾಯಾಗ್ರಾಹಕ ಸುರೇಶ್ ಬೈರಸಂದ್ರ. ಇದೊಂದು ರೌಡಿಸಂ ಹಾಗೂ ಸಂಬಂಧಗಳ ಸುತ್ತ ನಡೆಯುವ ಕಥೆ ಒಳಗೊಂಡ ಚಿತ್ರ. ನಾನು ನಿರ್ದೇಶಕನಾಗಿ ಮೂರನೇ ಪ್ರಯತ್ನ. ನಾನು ಹಾಸ್ಟೆಲ್‌ನಲ್ಲಿದ್ದಾಗ ನಡೆದಂತ ನೈಜಘಟನೆ ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಧರ್ಮ ಅವರ ಜೊತೆ ಎರಡನೇ ಸಿನಿಮಾ. ನಾನು ಧರ್ಮ ಅವರಿಗೆ ಮೊದಲು ಕಥೆ ಹೇಳಿದ್ದು, ನಂತರ ನಿರ್ಮಾಪಕರಿಗೆ ಎಂದ್ರು.

ಇನ್ನು ಚಿತ್ರಕ್ಕಾಗಿ ನಾವು ಸ್ಟ್ರಗಲ್ ಮಾಡ್ತಾ ಮೂರು ವರ್ಷ ಶೂಟಿಂಗ್ ಮಾಡಿದ್ದೇವೆ. ನಾಲ್ಕು ಆ್ಯಕ್ಷನ್‌ ಸೀನ್​ಗಳು ಚಿತ್ರದ ಹೈಲೈಟ್. ಇದರಲ್ಲಿ ನಟ ಧರ್ಮ ಅವರು ಢಿಫರೆಂಟ್ ಆಗಿ ಕಾಣಿಸಿದ್ದಾರೆ. ಜನವರಿ ಎರಡನೇ ವಾರ ಟ್ರೇಲರ್ ಬಿಡುಗಡೆ ಮಾಡುತ್ತೇವೆ. ಈ ಚಿತ್ರದಿಂದ ನಾವು ಗೆಲ್ಲಲೇಬೇಕು ಎಂದು ಪ್ರಯತ್ನ ಮಾಡಿದ್ದೇವೆ ಎಂದ್ರು.

ತಲ್ವಾರ್ ಚಿತ್ರದ ನಿರ್ಮಾಪಕ ಕಮ್ ಛಾಯಾಗ್ರಾಹಕ ಬಿ.ಎಂ. ಸುರೇಶ್ ಮಾತನಾಡಿ, ನಾನು ಈ ಕಥೆ ಕೇಳಿದಾಗ ಒಂದು ರೂಪ ತೆಗೆದುಕೊಳ್ಳುತ್ತದೆ ಎಂದು ಅನಿಸಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಈ ಚಿತ್ರದ ಮೂರು ಗೀತೆಗಳು ಹಿಟ್ ಆಗುವ ಭರವಸೆಯಿದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಮೇಶ್ ಬಣಕಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಸೋಮನಹಳ್ಳಿ ಜಯರಾಂ ಮತ್ತು ಬೈರೇಗೌಡ್ರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಹ ಕಲಾವಿದ ‘ಮಜಾ ಭಾರತ’ ಅವಿನಾಶ್, ಸಂಗೀತ ನಿರ್ದೇಶಕ ಪ್ರವೀಣ್ ಕೆ.ಬಿ, ಸಿಂಗರ್ ವಿಜೇತ ತಮ್ಮ ಅನುಭವ ಹಂಚಿಕೊಂಡರು. ಅಂದಹಾಗೆ ಈ ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಅವರು ಅಭಿನಯಿಸಿದ್ದು, ಈ ಸಿನಿಮಾದಲ್ಲಿ ಎರಡು ಶೇಡ್ ಇರೋ ಪಾತ್ರ ಮಾಡಿದ್ದಾರೆ. ಉಳಿದ ತಾರಾಗಣದಲ್ಲಿ ಜೆಕೆ, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರು ಇದ್ದಾರೆ.

ಇದನ್ನೂ ಓದಿ : ಅರಿಷಡ್ವರ್ಗ ಪ್ರತಿನಿಧಿಸುವ ‘ನಾಗವಲ್ಲಿ ಬಂಗಲೆ’ ಸಿನಿಮಾ ತೆರೆಗೆ ರೆಡಿ!

Leave a Comment

DG Ad

RELATED LATEST NEWS

Top Headlines

ಹೊಸ ವರ್ಷಕ್ಕೆ ಭರ್ಜರಿ ‘ಎಣ್ಣೆ’ ಸೇಲ್​ – ಅಬಕಾರಿ ಇಲಾಖೆಗೆ ಒಂದೇ ದಿನ ಬರೋಬ್ಬರಿ 308 ಕೋಟಿ ಆದಾಯ..!

ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರುಪಾಯಿ ಆದಾಯ ಹರಿದು ಬಂದಿದೆ. ಡಿಸೆಂಬರ್ 31ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2

Live Cricket

Add Your Heading Text Here