ರಾಜ್ಯ ಬಿಜೆಪಿಯಲ್ಲಿ ಹೊತ್ತಿಕೊಂಡ ಬಂಡಾಯದ ಜ್ವಾಲೆ ದೆಹಲಿ ಅಂಗಳಕ್ಕೆ ಬಂದು ನಿಂತಿದ್ದು, ಮಾಡು ಇಲ್ಲವೇ ಮಡಿ ಕದನ ಶುರುವಾಗಿದೆ. ವಿಜಯೇಂದ್ರ ವಿರುದ್ಧ ರೆಬೆಲ್ಸ್ ಟೀಂ ಹೈಕಮಾಂಡ್ ಮುಂದೆ ಸಮರ ಸಾರಿದ್ದು, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೇಬೇಕೆಂದು ಪ್ರತಿಜ್ಞೆ ಮಾಡಿದೆ. ಯಾವುದೇ ಕಾರಣಕ್ಕೂ ವಿಜಯೇಂದ್ರ ರಾಜ್ಯಾಧ್ಯಕ್ಷರಾಗುವುದು ಬೇಡ ಎಂದು ಪಟ್ಟು ಹಿಡಿದು ಕುಳಿತಿರುವ ಯತ್ನಾಳ್ ಟೀಂ, ವಿಜಯೇಂದ್ರಗೆ ದಿಗ್ಬಂಧನ ಹಾಕಲು ಬ್ಲೂ ಪ್ರಿಂಟ್ ಸಿದ್ದಪಡಿಸಿದೆ.
ಇದೀಗ ಮಹತ್ವದ ಬೆಳವಣಿಗೆಯಲ್ಲಿ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಬದಲಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಈ ಕುರಿತು ದೆಹಲಿಯಲ್ಲಿ ಅತೃಪ್ತರ ಬಣಕ್ಕೆ ವರಿಷ್ಠರು ಭರವಸೆ ನೀಡಿದ್ದಾರೆ. ಸಂಸತ್ತಿನ ಅಧಿವೇಶನ ಮತ್ತು ಪ್ರಧಾನ ಮಂತ್ರಿ ಪ್ರಯಾಗರಾಜ್ ಪ್ರವಾಸದ ಹಿನ್ನೆಲೆಯಲ್ಲಿ ಹಲವು ವರಿಷ್ಠರು ಅತೃಪ್ತರನ್ನು ಭೇಟಿಯಾಗಲಿಲ್ಲ. ಆದರೆ ಪಕ್ಷದ ಹಿರಿಯ ನಾಯಕ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮೂಲಕ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ನೇಮಕವಾಗುವ ಸಾಧ್ಯತೆ ಇದೆ. ಪ್ರತಿಪಕ್ಷ ನಾಯಕನಾಗಿ ಆರ್. ಅಶೋಕ್ ಅವರೇ ಮುಂದುವರೆಯಲಿದ್ದಾರೆ. ಬೊಮ್ಮಾಯಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ತಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಯತ್ನಾಳ್ ಬಣ ಹೈಕಮಾಂಡ್ ಮುಂದೆ ಸ್ಪಷ್ಟಪಡಿಸಿದ್ದು, ಬೊಮ್ಮಾಯಿಗೆ ಪಟ್ಟ ಕಟ್ಟಿದರೆಯಾವುದೇ ಗೊಂದಲ ಇರುವುದಿಲ್ಲ. ಅವರು ಎಲ್ಲರನ್ನೂ ನಿಭಾಯಿಸಿಕೊಂಡು ಹೋಗುತ್ತಾರೆ. ಬೊಮ್ಮಾಯಿ ತುಂಬಾ ಡೌನ್ ಟು ಅರ್ತ್, ಸೌಮ್ಯ ಸ್ವಭಾವ. ಬೊಮ್ಮಾಯಿ ಅಂತಹ ಲೀಡರ್ ಸದ್ಯಕ್ಕೆ ಬಿಜೆಪಿಯಲ್ಲಿ ಯಾರೂ ಇಲ್ಲ. ಅವರನ್ನೇ ಬಿಜೆಪಿ ರಾಜ್ಯಧ್ಯಕ್ಷರಾಗಿ ಮಾಡಿ ಎಂದು ಯತ್ನಾಳ್ ಟೀಂ ಫುಲ್ ವೋಟ್ ಹಾಕಿದ್ದಾರೆ. ಈ ಹಿನ್ನೆಲೆ ಬೊಮ್ಮಾಯಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ದೊರಕುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಇನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಸಂಪರ್ಕಿಸಿದ ಹೈಕಮಾಂಡ್ ವರಿಷ್ಠರು, ಅವರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ. ಬೊಮ್ಮಾಯಿ ನೇಮಕಕ್ಕೆ ಅಶೋಕ್ ಅವರು ಕೂಡ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚು ಕಡಿಮೆ ಇನ್ನೊಂದು ವಾರದಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಈಗ ಉದ್ಭವಿಸಿರುವ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆಯಿದೆ.
ಇದನ್ನೂ ಓದಿ : https://btvkannada.com/2025/02/06/rakshitaprem-home-wedding-celebration







