ಬೆಂಗಳೂರು : ಹೇಗಾದ್ರೂ ಮಾಡಿ ಸಿದ್ದರಾಮಯ್ಯ ಸರ್ಕಾರ ಕಿತ್ತಾಕ್ಬೇಕು ಅಂತಾ ಪ್ರತಿಪಕ್ಷ ಬಿಜೆಪಿ 50 ‘ಕೈ’ ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಿದ್ರು. ಭ್ರಷ್ಟಾಚಾರ ಮಾಡಿಲ್ಲ ಅಂತಾರಲ್ಲ, ಇದಕ್ಕೆ ದುಡ್ಡು ಎಲ್ಲಿಂದ ಬಂತು? ಎಂಬ ಸಿಎಂ ಸಿದ್ದರಾಮಯ್ಯ ಅವರ ಗಂಭೀರ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಇದೀಗ ತಿರುಗೇಟು ನೀಡಿದ್ದಾರೆ. ಬಹುಶಃ ನಿಮ್ಮ ಶಾಸಕರ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡಂತೆ ಕಾಣುತ್ತಿದೆ ಎಂದು ವಿಜಯೇಂದ್ರ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಿಎಂಗೆ ಟ್ವೀಟ್ ಮೂಲಕ ಟಾಂಗ್ : ಬಹುಶಃ ನಿಮ್ಮ ಶಾಸಕರ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡಂತೆ ಕಾಣುತ್ತಿದೆ. ಅದಕ್ಕಾಗಿಯೇ ₹50 ಕೋಟಿಗೆ ಅವರು ಮಾರಾಟವಾಗುತ್ತಿದ್ದಾರೆ ಎಂಬ ಕಪೋಲಕಲ್ಪಿತ ಆರೋಪ ಮಾಡುತ್ತಿದ್ದೀರಿ. ಇದು ನೀವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಶಾಸಕರನ್ನು ಮಾರಾಟದ ವಸ್ತುಗಳಂತೆ ವ್ಯಾಖ್ಯಾನಿಸಿ ಅವರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ನಿಮ್ಮ ಈ ಹೇಳಿಕೆ ಕಾಂಗ್ರೆಸ್ ಶಾಸಕರುಗಳನ್ನು ಅಂಕೆಯಲಿಟ್ಟುಕೊಳ್ಳಲು, ನಿಮ್ಮನ್ನು ಸುತ್ತುವರೆದಿರುವ ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಿಕೊಳ್ಳಲು ಹೆಣೆದಿರುವ ಹತಾಶೆಯ ಸುಳ್ಳಿನ ಕಂತೆ ಎಂದಿದ್ದಾರೆ.
ಕನಿಷ್ಠ ರಾಜಕೀಯ ಜ್ಞಾನ ಇರುವವರಿಗೂ ಅರಿವಾಗುತ್ತದೆ, ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವ ನೀವು ಅದರ ಘನತೆಯನ್ನು ಕುಗ್ಗಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ. ನಿಮ್ಮದೇ ಸರ್ಕಾರವಿದೆ, ನಿಮ್ಮದೇ ತನಿಖಾ ಸಂಸ್ಥೆಗಳಿವೆ, ₹50 ಕೋಟಿ ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸುವುದು ನಿಮ್ಮ ನೈತಿಕ ಜವಾಬ್ದಾರಿ. ಇಲ್ಲದಿದ್ದರೆ ನಿಮ್ಮ ಹೇಳಿಕೆ ಪುಡಾರಿಗಳು ನೀಡುವ ಬಾಲಿಶ ರಾಜಕೀಯ ಹೇಳಿಕೆಯಾಗುತ್ತದೆಯಷ್ಟೆ ಎಂದು ಸಿಎಂಗೆ ಟಾಂಗ್ ನೀಡಿದ್ದಾರೆ.
ಸರ್ಕಾರ ಬೀಳಿಸಲು ಸಾವಿರಾರು ಕೋಟಿ ಬಂಡವಾಳ ಹೂಡಲು ತಯಾರಾಗಿರುವವರು ಯಾರು? ಈ ಬಗ್ಗೆ ಇಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ತನಿಖೆ ನಡೆಸುವುದು ತುರ್ತು ಅಗತ್ಯವಿದೆ. ರಾಜ್ಯದ ಜನತೆಗೆ ಸತ್ಯ ತಿಳಿಯಬೇಕಿದೆ ಎಂದು ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ : ಆಯುಧ ಬಿಟ್ಟು ಅಕ್ಷರ ಹಿಡಿದ ಶಿವಣ್ಣ – ಮಕ್ಕಳ ದಿನಾಚರಣೆಯಂದೇ ಹೊಸ ಸಿನಿಮಾ ಘೋಷಿಸಿದ ಹ್ಯಾಟ್ರಿಕ್ ಹೀರೋ..!