ಬೆಂಗಳೂರು : ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಮತದಾನ ಆರಂಭಗೊಂಡಿದೆ. ಬೆಳಗ್ಗೆ 7 ಗಂಟೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ 11 ಗಂಟೆವರೆಗೂ 22.28ರಷ್ಟು ಮತದಾನ ನಡೆದಿದ್ದು, ಶಿಗ್ಗಾಂವಿಯಲ್ಲಿ ಶೇ.19ರಷ್ಟು ಮತದಾನ ನಡೆದಿದೆ. ಸಂಡೂರು ಕ್ಷೇತ್ರದಲ್ಲಿ ಶೇ.18ರಷ್ಟು ಮತದಾನ ನಡೆದಿದೆ.
ರಾಜ್ಯದಲ್ಲಿ 3 ಕ್ಷೇತ್ರಗಳ ಉಪ ಚುನಾವಣೆ ಜನರ ಗಮನ ಸೆಳೆದಿತ್ತು. ಮೂರು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರವನ್ನು ಹಮ್ಮಿಕೊಳ್ಳಲಾಗಿತ್ತು. ಹೆಚ್ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಈ ಚುನಾವಣೆಯಲ್ಲಿ ವೈಯಕ್ತಿಕ ಪ್ರತಿಷ್ಠೆಯ ಕಣವನ್ನಾಗಿ ಸ್ವೀಕಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮೂರು ಕ್ಷೇತ್ರಗಳ ಚುನಾವಣಾ ಕಣ ಗಮನ ಸೆಳೆಯುತ್ತಿದೆ.
ಸತತ 3ನೇ ಬಾರಿ ಚುನಾವಣಾ ಅದೃಷ್ಟ ಪರೀಕ್ಷೆಗೆ ಇಳಿದಿರುವ ಚನ್ನಪಟ್ಟಣ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತದಾನಕ್ಕೂ ಮುನ್ನ ಕ್ಷೇತ್ರದ ಪ್ರಸಿದ್ಧ ಶ್ರೀಕೆಂಗಲ್ ಆಂಜನೇಯ ಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಶಿಗ್ಗಾಂವಿಯಲ್ಲಿ ಎನ್ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಒಟ್ಟಿಗೆ ಬಂದು ಮತ ಚಲಾಯಿಸಿದರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಾಲೂಕಿನ ಚಕ್ಕೆರೆ ಮತಗಟ್ಟೆ 167ರಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ವೋಟ್ ಮಾಡಿದರು. ಸಂಡೂರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅನ್ನಪೂರ್ಣ ತುಕಾರಾಂ ತಮ್ಮ ಪತಿ ಮತ್ತು ಸಂಸದ ಈ ತುಕಾರಾಂ ಅವರೊಂದಿಗೆ ಪಟ್ಟಣದ ಇಂಜಿನಿಯರಿಂಗ್ ಉಪ ವಿಭಾಗ ಕಚೇರಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಇದನ್ನೂ ಓದಿ : ಮುಡಾ ಹಗರಣ ಕೇಸ್ – ಸಿಎಂ ಸಿದ್ದರಾಮಯ್ಯ ಆಪ್ತನಿಗೆ ED ಡ್ರಿಲ್..!