ಬೆಂಗಳೂರು : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಿನ್ನೆ ಸಂಜೆ ತೆರೆ ಬಿದ್ದಿದೆ. ಈ ಮಧ್ಯೆ ಪ್ರಚಾರದ ವೇಳೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಆಕ್ರೋಶ ಭುಗಿಲೆದ್ದಿತ್ತು.
ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಹಾಗೂ ವಿಶ್ವ ಒಕ್ಕಲಿಗ ಸಮುದಾಯಗಳ ಸಂಯುಕ್ತ ವೇದಿಕೆಯ ಸಂಸ್ಥಾಪಕರಾದ ಆರ್.ಎಲ್.ಎನ್ ಮೂರ್ತಿ ಅವರು ಸಚಿವ ಜಮೀರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಧಾನ ಸೌಧ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ‘ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ಸಚಿವ ಜಮೀರ್ ಅಹ್ಮದ್ ರಾಜಕೀಯ ದ್ವೇಷದಿಂದ ಹಾಗೂ ವೈಯಕ್ತಿಕ ದ್ವೇಷದಿಂದ ನಮ್ಮ ಸಮುದಾಯದ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಮಂತ್ರಿಗಳು ಹಾಗೂ ಭಾರತ ಸರ್ಕಾರದ ಹಾಲಿ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿಯವರನ್ನು “ಕರಿಯ” ಎಂಬ ಜನಾಂಗಿಯ ನಿಂದನೆ ಪದ ಬಳಸಿ ಅಪರಾಧ ಎಸಗಿರುತ್ತಾರೆ.
ಈ ಹೇಳಿಕೆಯು ಸಂವಿಧಾನ ವಿರೋಧಿಯಾಗಿದ್ದು, ವಕ್ಕಲಿಗ ಸಮುದಾಯದ ಸಮಸ್ತ ಜನರಿಗೆ ನೊಂವುಟಾಗಿದೆ. ಅಷ್ಟೇ ಅಲ್ಲದೆ, ಜಮೀರ್ ಅಹ್ಮದ್ರವರು ಪ್ರಚಾರಕ್ಕೋಸ್ಕರ ಹಾಗೂ ಅವರ ಸಮುದಾಯದ ಜನಗಳು ಹಾಗೂ ಮುಂಖಡರನ್ನು ಮೆಚ್ಚಿಸಲು ಬೇರೆ ಜಾತಿಗೆ ಸೇರಿದ ಜನಗಳಿಗೆ ಪದೇ ಪದೇ ಅವಮಾನ ಮಾಡುತ್ತಾ ಬಂದಿರುತ್ತಾರೆ. ಧರ್ಮಗಳ ಮಧ್ಯೆ ದ್ವೇಷ ಉಂಟಾಗುವ ಭಾಷಣಗಳನ್ನು ಮಾಡಿ ಧರ್ಮಗಳ ಮಧ್ಯೆ ಜಗಳಗಳನ್ನು ಉಂಟು ಮಾಡಿ ಅಸಂವಿಧಾನಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಹೀಗಾಗಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕೆಂದು ಎಂದು ದೂರಿನಲ್ಲಿ ವಕೀಲರಾದ ಆರ್.ಎಲ್. ಎನ್ ಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ : ಟಾಕ್ಸಿಕ್ ಚಿತ್ರತಂಡಕ್ಕೆ ಬಿಗ್ ಶಾಕ್ – ಅರಣ್ಯ ಇಲಾಖೆಯಿಂದ FIR ದಾಖಲು..!