ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ, ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಮುಂದಿರುವುದು ತಿಳಿದುಬಂದಿದೆ.
ಶೇಕಡಾ 4ರಷ್ಟು ಮುಸ್ಲಿಂ ಸಮುದಾಯಕ್ಕೆ ಸರ್ಕಾರದ ಗುತ್ತಿಗೆಯಲ್ಲಿ ಮೀಸಲಾತಿ ತರಲು ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ ಎನ್ನಲಾಗಿದ್ದು, ಕಾಯ್ದೆಯಲ್ಲಿ ಸಂಬಂಧಿತ ತಿದ್ದುಪಡಿ ಮಾಡುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯವರಿಗೆ ಶೇ 4 ಮೀಸಲಾತಿ ನೀಡುವ ಬಗ್ಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಅನುಮೋದನೆ ನೀಡಿರುವ ಸಿಎಂ, ತಿದ್ದುಪಡಿಗೆ ಸೂಚನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ಕಾಯ್ದೆಗೆ ತಿದ್ದುಪಡಿ ತಂದು ಮಂಡನೆ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಗುತ್ತಿಗೆಯಲ್ಲಿ ಶೇ 24ರ ಮೀಸಲಾತಿ ನೀಡಿರುವ ಸರ್ಕಾರ, ಒಬಿಸಿ ಸಮುದಾಯಕ್ಕೆ ಶೇ 4 ಮೀಸಲಾತಿ ನೀಡಿದೆ. 2A ಅಡಿ ಗುತ್ತಿಗೆಯಲ್ಲಿ ಶೇ 15 ಮೀಸಲಾತಿ ನೀಡಲಾಗಿದೆ. ಒಟ್ಟು ಸರ್ಕಾರದ ಕಾಮಗಾರಿಗಳಲ್ಲಿ ಶೇ 43ರಷ್ಟು ಮೀಸಲಾತಿ ನೀಡಲಾಗಿದೆ. ಈಗ ಮುಸ್ಲಿಂ ಸಮುದಾಯಕ್ಕೂ ಸರ್ಕಾರದ ಕಾಮಗಾರಿಗಳಲ್ಲಿ ಶೇ 4 ರಷ್ಟು ಮೀಸಲಾತಿ ನೀಡಲು ಮುಂದಾಗಿದೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಮುಸ್ಲಿಂ ಸಚಿವರು ಮತ್ತು ಶಾಸಕರು : ಕಾಮಗಾರಿಯಲ್ಲಿ 4% ಮುಸ್ಲಿಂಮರಿಗೆ ಮೀಸಲಾತಿ ನೀಡುವಂತೆ ಸಚಿವ ಜಮೀರ್ ಅಹ್ಮದ್ ಖಾನ್, ರಹೀಂ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ತನ್ವೀರ್ ಸೇಠ್, ಅಬ್ದುಲ್ ಜಬ್ಬಾರ್, ಎನ್ ಎ ಹ್ಯಾರಿಸ್, ರಿಜ್ವಾನ್ ಅರ್ಷದ್, ಆಸೀಫ್ ಸೇಠ್, ಖನೀಜಾ ಫಾತಿಮಾ, ಇಕ್ಬಾಲ್ ಹುಸೇನ್, ಬಲ್ಕಿಸ್ ಬಾನು ಸಹಿ ಮಾಡಿದ್ದರು. ಇದರಂತೆ, ಕಾಯ್ದೆಗೆ ತಿದ್ದುಪಡಿ ಮಾಡಿ ಕಡತ ಮಂಡಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಕಾಮಗಾರಿ ಬಿಲ್ ಬಿಡುಗಡೆಗೆ ಲಂಚಕ್ಕೆ ಬೇಡಿಕೆ – ಮಂಡ್ಯದಲ್ಲಿ ರೆಡ್ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ ಬಿದ್ದ ಗ್ರಾ.ಪಂ ಸದಸ್ಯ..!