ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) 50-50 ನಿವೇಶ ಹಂಚಿಕೆ ಹಗರಣ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಹಾಗೂ ಎಸ್‌ಐಟಿ ತನಿಖೆ ನಡೆಸುತ್ತಿವೆ. ಕರ್ನಾಟಕದಲ್ಲಿ ಬಹಳಷ್ಟು ಸದ್ದು ಮಾಡಿರುವ ಮುಡಾ ಹಗರಣದ ಕರ್ಮಕಾಂಡ ಬಗೆದಷ್ಟೂ ಬಯಲಾಗ್ತಿದೆ. ಬಿಟಿವಿ ಇದೀಗ ಮುಡಾ ಮಹಾ ಮೋಸದ ಮತ್ತೊಂದು ಸ್ಫೋಟಕ ಸ್ಟೋರಿಯನ್ನು ಬಯಲು ಮಾಡಿದೆ. ಹಣದಾಸೆಗೆ ಸತ್ತ ವ್ಯಕ್ತಿಯನ್ನೇ ಬದುಕಿಸಿ ಅಧಿಕಾರಿಗಳು ಅಕ್ರಮ ನಡೆಸಿರುವುದನ್ನು ಬಿಟಿವಿ ಬಯಲಿಗೆಳೆದಿದೆ.
2016ರಲ್ಲಿ ಸತ್ತ ವ್ಯಕ್ತಿ 2023ರಲ್ಲಿ ಬದುಕಿದ್ದಾರೆಂದು ದಾಖಲೆ ಸೃಷ್ಟಿಸಿ, ಯಾರದ್ದೋ ಜಾಗಕ್ಕೆ ನಕಲಿ ಮಾಲೀಕನ ಸೃಷ್ಟಿ ಮಾಡಿದ್ದಾರೆ. ಈ ಕಳ್ಳಾಟದಲ್ಲಿ ಮುಡಾದ ಅಧಿಕಾರಿಗಳ ಜೊತೆ ಹಿಂದಿನ ತಹಶೀಲ್ದಾರ್ ಕೂಡ ಸೇರಿದ್ದಾರೆ ಎಂಬುದು ತಿಳಿದು ಬಂದಿದೆ. ಎಸಿ ಕಚೇರಿಯಲ್ಲಿ ಇತ್ಯರ್ಥವಾಗಿದ್ದ ಆದೇಶ ತಿರುಚಿ ಹೊಸ ಆದೇಶ ನೀಡಲಾಗಿದೆ. ತಹಶೀಲ್ದಾರ್ ನವೀನ್ ಜೊಸೆಫ್ ನೀಡಿದ್ದ ವರದಿ ಬಚ್ಚಿಟ್ಟು ಹಿಂದಿನ ತಹಶೀಲ್ದಾರ್ ಗಿರೀಶ್ ನೀಡಿದ ಸುಳ್ಳು ದಾಖಲೆ ಪಡೆದು ಮುಡಾ ಅಧಿಕಾರಿಗಳು 11 ಸೈಟ್ ಡೀಲ್ ಮಾಡಿದ್ದಾರೆ ಎಂಬ ದೊಡ್ಡ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
2016ರಲ್ಲಿ ಕ್ಯಾತಮಾರನಹಳ್ಳಿ ನಿವಾಸಿ ಶಿವಚಿಕ್ಕಯ್ಯ ಮೃತಪಟ್ಟಿದ್ದರು. ಆದ್ರೆ 2023ರಂದು ತಹಶೀಲ್ದಾರ್ ಕೋರ್ಟ್ನಲ್ಲಿ ಹಾಜರಾಗಿದ್ದರು ಎಂದು ದಾಖಲೆ ಸೃಷ್ಟಿಯಾಗಿದೆ. ಹಿಂದಿನ ತಹಶೀಲ್ದಾರ್ ಬಿ.ಎನ್.ಗಿರೀಶ್ ಸಮ್ಮುಖದಲ್ಲಿ ನ್ಯಾಯ ತೀರ್ಮಾನವಾಗಿದ್ದು, ಮೂಲ ಜಮೀನು ಮಾಲೀಕ ಶಿವಚಿಕ್ಕಯ್ಯ ಈ ವೇಳೆ ಕೋರ್ಟ್ಗೆ ಹಾಜರಾಗಿದ್ದರೂ ಎಂದು ದಾಖಲೆಯನ್ನು ಸೃಷ್ಟಿ ಮಾಡಲಾಗಿದೆ. ಈ ಬಗ್ಗೆ ದಾಖಲೆ ನೀಡುವಂತೆ ಶಿವಚಿಕ್ಕಯ್ಯ ಮಕ್ಕಳಿಂದ ಅರ್ಜಿ ಸಲ್ಲಿಸದರೂ ಕೂಡ ಇಲ್ಲಿಯವರೆಗೆ ಯಾವುದೇ ಉತ್ತರವನ್ನು ಮುಡಾ ಅಧಿಕಾರಿಗಳಿಂದ ಬಂದಿಲ್ಲ.
ಶಿವಚಿಕ್ಕಯ್ಯ ಕ್ಯಾತಮಾರನಹಳ್ಳಿ ಸ.ನಂ.55ರಲ್ಲಿ 4 ಎಕರೆ 36 ಗುಂಟೆ ಹೊಂದಿದ್ದರು. ಮುಡಾ 2.19 ಎಕರೆ ಸ್ವಾಧೀನ ಮಾಡಿ 1.30 ಲಕ್ಷ, 3 ಸೈಟ್ ಪರಿಹಾರ ನೀಡಿತ್ತು. ಉಳಿದ 2 ಎಕರೆ 19 ಗುಂಟೆ ಶಿವಚಿಕ್ಕಯ್ಯ ಹೆಸರಿನಲ್ಲಿತ್ತು. ಆದ್ರೆ ಅಧಿಕಾರಿಗಳು ಈ ಜಮೀನಿಗೆ ಕೆ.ಚಂದ್ರು ಮಾಲೀಕ ಎಂದು ದಾಖಲೆ ಸೃಷ್ಟಿ ಮಾಡಿದ್ದಾರೆ.
ಅಲ್ಲದೇ ನಕಲಿ ಮಾಲೀಕ ಕೆ.ಚಂದ್ರುಗೆ 50:50 ಅನುಪಾತದಲ್ಲಿ 11 ಸೈಟ್ ಹಂಚಿಕೆ ಮಾಡಲಾಗಿದೆ. ಅರ್ಜಿ ಹಾಕಿದ ನಾಲ್ಕೇ ದಿನಕ್ಕೆ ವಿಜಯನಗರದಲ್ಲಿ ಮಾಜಿ ಆಯುಕ್ತ ದಿನೇಶ್ ಕುಮಾರ್ ಸೈಟ್ ಹಂಚಿಕೆ ಮಾಡಿದ್ದಾರೆ. ಮುಡಾಗೆ ಬರೆದ ಅರ್ಜಿಯಲ್ಲಿ ಅರ್ಜಿದಾರ ವಿಳಾಸವನ್ನೇ ನಮೂದಿಸದೆ ಮುಡಾದಲ್ಲಿ ಮನಬಂದಂತೆ ಅಧಿಕಾರಿಗಳು ಲೂಟಿ ಹೊಡೆದಿರುವ ಮಹಾ ಸ್ಫೋಟಕ ಸ್ಟೋರಿ ಬಯಲಾಗಿದೆ
ಇದನ್ನೂ ಓದಿ : ಅಂಬರೀಶ್ ಮನೆಗೆ ಜೂನಿಯರ್ ಅಂಬಿ ಎಂಟ್ರಿ.. ಅಭಿಷೇಕ್-ಅವಿವಾ ದಂಪತಿಗೆ ಗಂಡು ಮಗು ಜನನ..!