ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತಹ ‘ಕೆ.ಜಿ.ಎಫ್’, ‘ಕಾಂತಾರ’ ದಂತಹ ಯಶಸ್ವಿ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್, ಸೂಪರ್ ಹಿಟ್ ಪ್ರೊಡಕ್ಷನ್ ಹೌಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ ಚಿತ್ರಂಗಕ್ಕೆ ಸೀಮಿತವಾಗಿರದೇ ಬೇರೆ ಭಾಷೆಯ ಸಿನಿಮಾಗಳಿಗೂ ಹೊಂಬಾಳೆ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ಇದರ ನಡುವೆ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ, ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಜೊತೆಗೆ ದೀರ್ಘ ಕಾಲದ ಒಪ್ಪಂದವೊಂದನ್ನು ಭಾರಿ ಮೊತ್ತಕ್ಕೆ ಮಾಡಿಕೊಂಡಿದೆ. ಈ ಬಗ್ಗೆ ಅಧಿಕೃತ ಘೋಷಣೆ ಸಹ ಮಾಡಿದೆ.
ಪ್ರಸ್ತುತ ಭಾರತೀಯ ಚಿತ್ರರಂಗದ ಅತಿ ದೊಡ್ಡ ಸ್ಟಾರ್ ಪ್ರಭಾಸ್. ದೊಡ್ಡ-ದೊಡ್ಡ ನಿರ್ಮಾಣ ಸಂಸ್ಥೆಗಳು ಪ್ರಭಾಸ್ ಜೊತೆಗೆ ಸಿನಿಮಾ ಮಾಡಲು ಸಾಲು ನಿಂತಿವೆ. ಆದರೆ ಪ್ರಭಾಸ್ ಮಾತ್ರ ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಹೊಂಬಾಳೆ ಪ್ರೊಡಕ್ಷನ್ ಪ್ರಭಾಸ್ ಜೊತೆಗೆ ದೀರ್ಘ ಕಾಲದ ಒಪ್ಪಂದವೊಂದನ್ನು ಭಾರಿ ಮೊತ್ತಕ್ಕೆ ಮಾಡಿಕೊಂಡಿದೆ. ಹೊಂಬಾಳೆ, 2026, 2027, 2028ಕ್ಕೆ ವರ್ಷಕ್ಕೆ ಒಂದೊಂತೆ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಿದೆ.
ಈಗಾಗಲೇ ಪ್ರಭಾಸ್ ಜೊತೆ ‘ಸಲಾರ್; ಪಾರ್ಟ್ 1 ಸೀಸ್ಫೈರ್’ ಸಿನಿಮಾವನ್ನು ನಿರ್ಮಾಣ ಮಾಡಿ ಯಶಸ್ಸು ಕಂಡಿದೆ. ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೇ ಬೆನ್ನಲ್ಲೇ ಮೂರು ವರ್ಷಕ್ಕೆ ಮೂರು ಸಿನಿಮಾಗಳನ್ನು ಪ್ರಭಾಸ್ಗಾಗಿ ಸಿನಿಮಾ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಅನೌನ್ಸ್ ಮಾಡಿದೆ.
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ ಫಿಲಮ್ಸ್, ‘ರೆಬಲ್ ಸ್ಟಾರ್ ಜೊತೆಗೆ ಕೈಜೋಡಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಭಾರತೀಯ ಸಿನಿಮಾದ ಸಾರವನ್ನು ಸಂಭ್ರಮಿಸುವ ಹಾಗೂ ಅದನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಲು ಈ ಕೈಜೋಡಿಸುವಿಕೆ ಅತ್ಯಂತ ಮಹತ್ವದ್ದಾಗಲಿದೆ. ಸಿನಿಮಾ ಪ್ರೇಮಿಗಳಿಗೆ ಮರೆಯಲಾಗದ ಸಿನಿಮಾ ಅನುಭವವನ್ನು ಕೊಡುವುದು ನಮ್ಮ ಘೋಷಣೆಯಾಗಿದೆ. ವೇದಿಕೆ ಸಜ್ಜಾಗಿದೆ, ಮುಂದಿನ ಹಾದಿ ಮಿತಿಯಿಲ್ಲದ್ದಾಗಿದೆ. ‘ಸಲಾರ್ 2’ ಸಿನಿಮಾದ ಜೊತೆಗೆ ನಮ್ಮ ಈ ಪಯಣ ಪ್ರಾರಂಭ ಆಗಲಿದೆ’ ಎಂದಿದೆ ಹೊಂಬಾಳೆ.
ಇದನ್ನೂ ಓದಿ : ಬೈ ಎಲೆಕ್ಷನ್ ಅಖಾಡದಲ್ಲಿ ವಕ್ಫ್ ಜಟಾಪಟಿ – ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು..!