ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ಗೆ ಬಿಗ್ ರಿಲೀಫ್ ಸಿಕ್ಕಿದೆ. ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ.
ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಬೆನ್ನುಹುರಿ ನೋವಿಗೆ ಪರಿಹಾರ ಪಡೆಯಲು ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಂಡಬೇಕೆಂದು ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿ ಜಾಮೀನು ತಿರಸ್ಕೃತಗೊಂಡ ಪರಿಣಾಮ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್‌ನಲ್ಲಿ ದರ್ಶನ್ ಪರ ವಕೀಲ ಸಿ.ವಿ ನಾಗೇಶ್, ದರ್ಶನ್ ನೋವು ಉಲ್ಲೇಖಿಸಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಅವಶ್ಯಕತೆ ಇದೆ. ಇಲ್ಲವಾದಲ್ಲಿ ದರ್ಶನ್ ಒಂದು ಕಾಲಿಗೆ ಆಗಿರುವ ಸಮಸ್ಯೆ ಎರಡೂ ಕಾಲಿಗೆ ಆಗಬಹುದು. ಹೀಗಾಗಿ 3 ತಿಂಗಳು ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದರು. ಈ ವಾದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರಸನ್ನ ಕುಮಾರ್ ತೀವ್ರ ಆಕ್ಷೇಪಿಸಿದರು.
ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಎರಡು ಕಡೆಯ ವಾದ-ಪ್ರತಿವಾದವನ್ನು ಆಲಿಸಿ ಇಂದಿಗೆ ಆದೇಶ ಕಾಯ್ದಿರಿಸಿತ್ತು. ಇದೀಗ ದರ್ಶನ್ಗೆ ಮಧ್ಯಂತರ ಜಾಮೀನು ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಹೈಕೋರ್ಟ್ ದರ್ಶನ್ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಎಸ್‌ಪಿಪಿ ಮನವಿ ಮೇರೆಗೆ ದರ್ಶನ್ ಅವರ ಪಾಸ್ಪೋರ್ಟ್ ವಶಕ್ಕೆ ನೀಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಒಂದು ವಾರದ ಒಳಗಾಗಿ ನ್ಯಾಯಾಲಯಕ್ಕೆ ಚಿಕಿತ್ಸೆಯ ವಿವರಗಳನ್ನು ಸಲ್ಲಿಸಬೇಕಿದೆ.
ಇದನ್ನೂ ಓದಿ : ಕಲಬುರಗಿ ಜಿಲ್ಲೆಗೂ ವ್ಯಾಪಿಸಿದ ವಕ್ಫ್ ಭೂಮಿ ವಿವಾದ – 45 ರೈತರಿಗೆ ನೋಟಿಸ್..!