ಹಾಸನ : ಹಾಸನಾಂಬೆ ದರ್ಶನಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ಇದರಿಂದ ಭಕ್ತರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹರಸಾಹಸಪಡುತ್ತಿದೆ. ಇನ್ನು ದೇವಿ ದರ್ಶನಕ್ಕೆ ಬಂದ ಭಕ್ತರನ್ನು ಬಿಡುವ ವಿಚಾರಕ್ಕೆ ಡಿಸಿ ಕಚೇರಿ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾರಾಮಾರಿ ಆಗಿರುವ ಘಟನೆ ನಡೆದಿದೆ.
ಇದೇ ಕಾರಣಕ್ಕೆ ಹಾಸನ ಡಿಸಿ ಸಿ.ಸತ್ಯಭಾಮಾ ಸಾರ್ವಜನಿಕವಾಗಿಯೇ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಷ್ಟಾಚಾರದ ವಾಹನ ತಡೆದಿದ್ದಕ್ಕೆ ಜಿಲ್ಲಾಧಿಕಾರಿ ಪಿಎ ಶಶಿ ಹಾಗೂ ಸಬ್‌ಇನ್ಸ್‌ಪೆಕ್ಟರ್ ನಡುವೆ ವಾಗ್ವಾದ ನಡೆದಿತ್ತು. ಡಿಸಿ ಪಿಎ ಶಶಿ ಎಂಬಾತನನ್ನು ಪೊಲೀಸರು ಹೊರಗೆ ತಳ್ಳಿದ್ದರು ಎಂಬ ಆರೋಪ ಕೇಳಿಬಂದಿತ್ತು.
ವಿಚಾರ ತಿಳಿದು ಸಿಸಿಟಿವಿ ಪರಿಶೀಲನೆಗೆ ಮುಖ್ಯ ದ್ವಾರದ ಬಳಿ ಡಿಸಿ ಸಿ.ಸತ್ಯಭಾಮ ಬಂದಿದ್ದರು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿ ಅಮಾನತು ಮಾಡಿಸುವುದಾಗಿ ಪೊಲೀಸ್ ಅಧಿಕಾರಿ ಎಚ್ಚರಿಕೆಯನ್ನು ನೀಡಿದ್ದಾರೆ.
ಇದರಿಂದ ಇನ್ನಷ್ಟು ಸಿಟ್ಟಾದ ಪೊಲೀಸ್ ಅಧಿಕಾರಿಗಳು ಡಿಸಿ ಮಾತಿಗೆ ಸಾರ್ವಜನಿಕವಾಗಿಯೇ ತಿರುಗೇಟು ನೀಡಿದ್ದಾರೆ. ನಿಮ್ಮ ಪಿಎ ವರ್ತನೆಯೇ ಘಟನೆಗೆ ಕಾರಣ ಎಂದು ಡಿಸಿ ಮುಂದೆ ಏರು ಧ್ವನಿಯಲ್ಲೇ ಸಿಪಿಐ ರವಿ ಮಾತನಾಡಿದ್ದಾರೆ. ಈ ನಡುವೆ ಮಳವಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಮತ್ತು ಡಿಸಿ ನಡುವೆ ವಾಗ್ವಾದ ನಡೆದಿದೆ.
ಈ ಹಂತದಲ್ಲಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಗೇಟ್ ಮುಂದೆ ಕಂದಾಯ ಅಧಿಕಾರಿಗಳು ನಿಂತು ಕೆಲಸ ನಿರ್ವಹಿಸುವಂತೆ ಡಿಸಿ ಆದೇಶ ನೀಡಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿ ಡಿಸಿ ಸಿ.ಸತ್ಯಭಾಮ ಹೊರಟಿದ್ದಾರೆ. ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಆಗಮಿಸಿದ್ದಾರೆ.
ಇದನ್ನೂ ಓದಿ : ವಕ್ಫ್ ಭೂ ಬಿರುಗಾಳಿ ಎದ್ದಿರೋ ವಿಜಯಪುರಕ್ಕೆ ನಾಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ..!