ಬಿಗ್ಬಾಸ್ ಹತ್ತನೇ ಸೀಸನ್‌ನ ಅಂತಿಮ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ನಮ್ರತಾ ಈ ವಾರ ಮನೆಯಿಂದ ಹೊರಬಿದ್ದಿದ್ದಾರೆ. ‘ಬಿಗ್‌ಬಾಸ್ ಈ ಸೀಸನ್‌ನಲ್ಲಿ ನಿಮ್ಮ ಕಾಂಟ್ರಿಬ್ಯೂಷನ್ ನಿಜಕ್ಕೂ ಮಹತ್ವದ್ದು. ನೀವು ಯಾರು ಎಂದು ನನಗೂ ತೋರಿಸಿಕೊಟ್ಟಿದ್ದೀರಿ’ ಎಂಬ ಮೆಚ್ಚುಗೆಯ ಮಾತನ್ನು ಕಿಚ್ಚನ ಬಾಯಿಂದಲೇ ಕೇಳಿಸಿಕೊಂಡಿರುವ ನಮ್ರತಾ ಅವರು ಮನೆಯಿಂದ ಹೊರಗೆ ಬಂದ ಕೂಡಲೇ ತಮ್ಮ ಜರ್ನಿಯ ಬಗ್ಗೆ ಜಿಯೊ ಸಿನಿಮಾಗೆ ಎಕ್ಸ್‌ಕ್ಲೂಸೀವ್ ಸಂದರ್ಶನ ನೀಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ.
ಎಲಿಮಿನೇಷನ್ ಶಾಕ್!
ನಾನು ನಿಮ್ಮ ನಮೃತಾ. ಬಿಗ್‌ಬಾಸ್ ಹತ್ತನೇ ಸೀಸನ್‌ನ ಟಾಪ್ ಸೆವೆನ್ ಸ್ಪರ್ಧಿಗಳಲ್ಲಿ ಒಬ್ಬಳು ನಾನು. ನಿಜಕ್ಕೂ ಸಖತ್ ಬೇಜಾರಾಗ್ತಿದೆ. ಹತ್ತೊಂಬತ್ತು ಜನರಲ್ಲಿ ಏಳನೇ ಸ್ಥಾನದವರೆಗೂ ಬಂದಿರುವುದು ಖಂಡಿತ ಸುಲಭವ ಸಂಗತಿ ಅಲ್ಲ. ಮೂರು ದಿನಗಳ ಹಿಂದೆ ಹಳೆಯ ಸ್ಪರ್ಧಿಗಳೆಲ್ಲ ಬಂದು ಒಂದು ಬಾಂಬ್ ಹಾಕ್ತಾರೆ. ನಿಂಗೆ ಚಾನ್ಸ್ ಇಲ್ಲ ಅಂತ. ಆಗ ನನಗೆ ಓ ಎಂದು ನನ್ನ ಆತ್ಮವಿಶ್ವಾಸ ಕುಗ್ಗಲು ಶುರುವಾಯ್ತು. ಆದರೂ ನನ್ನನ್ನು ನಾನು ಸಂಭಾಳಿಸಿಕೊಂಡು ಆಟ ಆಡಲು ಶುರುಮಾಡಿದೆ. ಆದರೆ ಈಗ ಮನೆಯಿಂದ ಹೊರಗೆ ಬಂದಿದ್ದು ನಿಜಕ್ಕೂ ಶಾಕ್.
ಈ ನೂರಾ ಆರು ದಿನಗಳ ಪಯಣವನ್ನು ಸಣ್ಣದಾಗಿ ವಿವರಿಸಲು ಸಾಧ್ಯವೇ ಇಲ್ಲ. ಅದರಲ್ಲಿಯೂ ನನ್ನ ಜರ್ನಿ ನಿಜವಾಗಿಯೂ ಏರಿಳಿತದ ಪಯಣವಾಗಿತ್ತು. ಎಲ್ಲಿಂದಲೋ ಶುರುಮಾಡಿ ಎಲ್ಲಿಗೋ ಹೋಗಿ, ಕೆಳಗೆ ಇಳಿದು ಮತ್ತೆ ಮೇಲೆ ಏರಿ ಹೋದ ಜರ್ನಿ ನಂದು.
ಸ್ನೇಹಿತರ ಜೊತೆಗೆ ಮಾತಾಡುವುದು ನನಗೆ ತುಂಬ ಖುಷಿ ಕೊಟ್ಟಿತ್ತು. ಆದರೆ ಆ ಫ್ರೆಂಡ್‌ಷಿಪ್ ನಲ್ಲಿ ಮಾತಾಡುತ್ತಿದ್ದಾಗ ಬೇರೆಯವರ ಬಗ್ಗೆ ಒಂದು ಒಪಿನಿಯನ್ ಕ್ರಿಯೇಟ್ ಆಗುತ್ತದೆ.
ಅವರು ಕೆಟ್ಟವರು, ಅವರು ಒಳ್ಳೆಯವರು ಎಂದೆಲ್ಲ. ಆದರೆ ಹೋಗ್ತಾ ಹೋಗ್ತಾ ನಾನು ಮೈಚಳಿ ಬಿಟ್ಟು ಅವರ ಜೊತೆಗೆ ಸೇರಲು ಪ್ರಾರಂಭಿಸಿದಾಗ, ‘ಏಯ್… ಅವರೂ ನಾನು ಅಂದುಕೊಂಡಷ್ಟು ಕೆಟ್ಟವರಲ್ಲ’ ಅನಿಸಿತು. ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ. ಆದರೆ ಆಯಾ ಸಂದರ್ಭದಲ್ಲಿ ಎಲ್ಲರೂ ಕೆಟ್ಟವರ ಹಾಗೆ ಕಾಣಿಸುತ್ತಿರುತ್ತಾರೆ.
ನಾನೂ ಅಂಥ ಕೆಲವು ಸಂದರ್ಭಗಳಲ್ಲಿ ಕೆಟ್ಟವರಾಗಿರುತ್ತೇನೆ. ಬಿಗ್ಬಾಸ್ ಮನೆಯಲ್ಲಿ ನಾನು ಸಣ್ಣಪುಟ್ಟ ತಪ್ಪುಗಳನ್ನು ಮಾಡಿರಬಹುದು. ಆದರೆ ಇವೆಲ್ಲ ಹೇಳುವ ಥರ, ಶಾಡೊ, ಇನ್‌ಪ್ಲ್ಯೂಯೆನ್ಸ್ ಎಲ್ಲ ಆಗಿಲ್ಲ. ನಾನು ನಿಜವಾದ ಸ್ನೇಹಿತರನ್ನು ಕಂಡುಕೊಂಡಿದ್ದೇನೆ. ಆರಂಭದಲ್ಲಿ ಗೇಮ್ ಆಡಲು, ಸ್ಟ್ರಾಟೆಜಿ ಮಾಡಲು ಗೊತ್ತಾಗ್ತಿರ್ಲಿಲ್ಲ. ಆದರೆ ನಾನು ಕಲಿತಾ ಬಂದೆ. ಕಲಿಯುವಷ್ಟರಲ್ಲಿ ಸ್ವಲ್ಪ ಸಮಯ ತಗುಲಿತು ಅಷ್ಟೆ. ನಂತರ ನಾನು ಆಟದಲ್ಲಿ ಇಳಿದೆ.
ಇದೊಂದು ಸೋಲ್‌ಫುಲ್ ಜರ್ನಿ
ಬಿಗ್‌ಬಾಸ್ ಮನೆಯಲ್ಲಿ ಕಳೆದ ದಿನಗಳು ನನ್ನ ಪಾಲಿಗೆ ಸೋಲ್‌ಫುಲ್ ಜರ್ನಿ. ಇಲ್ಲಿ ಯಾರೂ ಕೆಟ್ಟವರಲ್ಲ. ಈ ಪ್ರಯಾಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ರಿಯಲ್ ಫ್ರೆಂಡ್‌ಷಿಪ್ ಕೂಡ ಮನೆಯೊಳಗಲ್ಲ, ಹೊರಗೇ ಮುಂದುರಿಯುತ್ತದೆ ಅಂದುಕೊಂಡಿದ್ದೇನೆ. ಎಲ್ಲರ ಜೊತೆಗೂ ಸಂಪರ್ಕದಲ್ಲಿ ಇರಲು ಬಯಸುತ್ತೇನೆ.
ನನ್ನ-ಸಂಗೀತಾ ನಡುವಿನ ಫ್ರೆಂಡ್‌ಷಿಪ್ ಅನ್ನು ಒಂದೇ ಪದದಲ್ಲಿ ಹೇಳಬೇಕು ಅಂದರೆ ಸಿಸ್ಟರ್‍ಹುಡ್. ನನಗೆ ಆ ಥರ ಬಾಂಡಿಂಗ್ ಆಗೋದು ಕಡಿಮೆ. ಆದರೆ ಇಲ್ಲಿ ಆಯ್ತು. ಸಂಗೀತಾ ಏನೇ ಇದ್ರೂ ಮುಖದ ಮೇಲೇ ಹೇಳ್ತಾರೆ. ನೀನು ಇಲ್ಲಿ ತಪ್ಪು ಮಾಡಿದೆ. ಇದು ಸರಿ ಎಂಬುದನ್ನು ನೇರವಾಗಿ ಹೇಳ್ತಾರೆ. ಅಂಥ ಕ್ರಿಟಿಕ್ ಎಲ್ಲರ ಬದುಕಿನಲ್ಲಿಯೂ ಇರಬೇಕು ಅನಿಸುತ್ತದೆ.
ನನಗೆ ಅಣ್ಣ ಇಲ್ಲ ಎಂಬ ಕೊರಗು ಯಾವಾಗಲೂ ಇತ್ತು. ಆ ಸ್ಥಾನವನ್ನು ವಿನಯ್ ತುಂಬಿದ್ದಾರೆ. ಹೊರಗಡೆ ಕೂಡ ಆ ಬಂಧನವನ್ನು ಮುಂದುವರಿಸಿಕೊಳ್ಳಲು ಬಯಸುತ್ತೇನೆ. ಇಡೀ ಮನೆಯಲ್ಲಿ ನನಗೆ ಬಹುಬೇಗ ಮನಸ್ಸಿಗೆ ಹತ್ತಿರವಾದವನು ಪ್ರತಾಪ್. ಆವಾಗಾವಾಗ ವಿಯರ್ಡ್ ಆಗಿ ಆಡ್ತಾನೆ ನಿಜ. ಆದರೆ ಅವನು ಇರೋದೇ ಹಾಗೆ. ಅವನನ್ನು ಹಾಗೆಯೇ ಒಪ್ಪಿಕೊಂಡಿದ್ದೇನೆ ನಾನು. ಮೊದಲು ಅವನು ಒಪಿನಿಯನ್ ಹೇಳಬೇಕಾದರೆ, ಕಮೆಂಟ್ ಮಾಡುವುದನ್ನು ಕೇಳಿದಾಗ ಕೋಪ ಬರುತ್ತಿತ್ತು. ಏನೋ ಹೇಳಿದ್ದನ್ನು ಪರ್ಸನಲ್ ಆಗಿಟ್ಟುಕೊಂಡು ತುಂಬದಿನ ಸಾಧಿಸ್ತಿದ್ದ. ಆದರೆ ಈಗ, ಅವನೂ ಅದನ್ನೆಲ್ಲ ಬಿಟ್ಟು ತುಂಬ ಚೇಂಜ್ ಆಗಿದ್ದಾನೆ.
ಅವನ ಅಪ್ಪ, ಅಮ್ಮ ಇಬ್ಬರೂ ಸಿಕ್ಕಾಪಟ್ಟೆ ಒಳ್ಳೆಯ ಜನ, ಮುಗ್ಧರು. ನಾನು ನೋಡಿದ ತಕ್ಷಣ ಪಟ್ ಅಂತ ಕನೆಕ್ಟ್ ಆದೆ. ಅವರಿಬ್ಬರ ಸೆಲ್ಫ್‌ಸೆಲ್ ಮಾತು ನೋಡಿ ಇಷ್ಟವಾಯ್ತು. ಅವನು ‘ನಾನು ನಿಮಗೆ ಸೀರೆ ಕೊಡಿಸ್ತೀನಿ ದೀ… ನಿಮಗೆ ಓಲೆ ಜುಮುಕಿ ಕೊಡಿಸ್ತೀನಿ’ ಎಂದು ಹೇಳೋನು. ಬಟ್ ಅವರ ತಂದೆ ತಾಯಿ ಸೀರೆ ತಂದುಕೊಟ್ಟಿದ್ದು ನೋಡಿ ಬಹಳ ಎಮೋಷನಲ್ ಆಯ್ತು. ನಮ್ಮೋರು ಅಂತ ಅನಿಸಿತು. ಬೇಕೋ ಬೇಡವೋ ನಾನು ಯಾವಾಗಲೂ ಅವನ ದಿದಿ ಆಗಿಯೇ ಇರುತ್ತೇನೆ. ಅವನು ಯಾವಾಗಲೂ ನನ್ನ ಪುಟ್ಟ ತಮ್ಮನೇ.
ತುಕಾಲಿಯೇ ಫೇಕ್
ನನಗೆ ಅಕ್ಷರಶಃ ಫೇಕ್ ಅನಿಸಿದ್ದು ತುಕಾಲಿ ಸಂತೋಷ್ ಅವರು. ಅವರನ್ನು ಬಿಟ್ಟರೆ ಮತ್ತೆ ವಾಪಸ್ ಮನೆಯೊಳಗೆ ಬಂದಾಗ ಅನಿಸಿದ್ದು ಸ್ನೇಹಿತ್ ಕೂಡ ಫೇಕ್ ಎಂದು. ನಾನು ಅವರ ಕಡೆಯಿಂದ ಸಾಕಷ್ಟು ಬೆಂಬಲ ನಿರೀಕ್ಷಿಸಿದ್ದೆ. ಆದರೆ ಅವರು ಬಂದು ನನ್ನ ತುಂಬ ಡಿಮೋಟಿವೇಟ್ ಮಾಡಿದ್ದು ಸ್ನೇಹಿತ್.
ಇಡೀ ಮನೆಯಲ್ಲಿ ನಾನು ತುಂಬ ಜೆನ್ಯೂನ್ ಆಗಿದ್ದೆ. ಹಾರ್ಟ್‌ಫುಲಿ ಜೆನ್ಯೂನ್ ಆಗಿದ್ದೆ. ಒಬ್ಬರನ್ನು ಬೈದರೂ ಉಗಿದರೂ, ಪ್ರೀತಿಸದರೂ ಹೃದಯದಿಂದ ಮಾಡ್ತಿದ್ದೆ. ನನ್ನ ಬಿಟ್ರೆ ವಿನಯ್. ಅವರಲ್ಲಿ ನನಗೆ ಯಾವತ್ತೂ ಕಲ್ಮಶ ಕಾಣಿಸಲಿಲ್ಲ. ಸಂಗೀತ ಕೂಡ. ಅವರನ್ನು ನಾನು ತುಂಬ ತಪ್ಪು ತಿಳ್ಕೊಂಡಿದ್ದೆ. ಅವರು ಏನನಿಸುತ್ತದೋ ಅದನ್ನೇ ಮಾತಾಡ್ತಾರೆ. ಹೇಗನಿಸ್ತಾರೋ ಹಾಗೇ ಇರ್ತಾರೆ. ಅವರೂ ಜೆನ್ಯೂನ್ ಅನಿಸುತ್ತಾರೆ ನನಗೆ. ಟಾಪ್ 3ನಲ್ಲಿ ವಿನಯ್, ಸಂಗೀತಾ ಮತ್ತು ತುಕಾಲಿ ಇರ್ತಾರೆ. ನನಗೆ ವಿನಯ್ ವಿನ್ ಆಗ್ಬೇಕು ಅಂತ ಇದೆ. ಆದರೆ ಯಾಕೋ ನನ್ನ ಸಿಕ್ಸ್ತ್ ಸೆನ್ಸ್ ಹೇಳ್ತಿದೆ ಸಂಗೀತಾ ವಿನ್ ಆಗ್ತಾರೆ ಅಂತ. ನನ್ನ ಪ್ರಕಾರ ಈ ಸೀಟಲ್ಲಿ ನನ್ನ ನಂತರ ಕಾರ್ತಿಕ್ ಮಹೇಶ್ ಕೂತಿರ್ತಾರೆ.
ಜಿಯೊ ಸಿನಿಮಾ ಫನ್ ಫ್ರೈಡೆ
ಜಿಯೊ ಸಿನಿಮಾ ಫನ್ ಫ್ರೈಡೆಯ ಎಲ್ಲ ಟಾಸ್ಕ್‌ಗಳನ್ನೂ ನಾನು ಎಂಜಾಯ್ ಮಾಡಿದ್ದೇನೆ. ಅದರಲ್ಲಿ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಲೂನ್ ಒಡೆಯುವ ಟಾಸ್ಕ್ ಅನ್ನು ನಾನು ಸಖತ್ ಎಂಜಾಯ್ ಮಾಡಿದೆ. ಸಂತು-ಪಂತು ಆಟ ನೋಡಿ ಸಿಕ್ಕಾಪಟ್ಟೆ ನಕ್ಕಿದ್ದೇನೆ. ಮೊನ್ನೆ ಇನ್ನೊಂದು ಫುಟ್‌ಬಾಲ್ ಇರುತ್ತದೆ. ಅದನ್ನು ಸ್ಮೈಲಿ ಬಾಲ್‌ನಲ್ಲಿ ಹೊಡೆದು ತಳ್ಳಬೇಕು. ಅಲ್ಲಿಯೂ ನಾನು ಸಖತ್ ಎಂಜಾಯ್ ಮಾಡಿದ್ದು ಸಂತು-ಪಂತು ಆಟ ನೋಡಿ.
ಮೈಕ್ ಮಸಲ್ ಮೆಮರಿ ಆಗ್ಬಿಟ್ಟಿದೆ
ಬಿಗ್‌ಬಾಸ್ ಮನೆಯಲ್ಲಿ ನಾನು ತುಂಬ ಮಿಸ್ ಮಾಡ್ಕೊಳ್ಳೋದು ಮೈಕ್. ಅದು ನನ್ನ ಮಸಲ್ ಮೆಮರಿ ಆಗ್ಬಿಟ್ಟಿದೆ. ಈಗಲೂ ನಾನು ಮೈಕ್ ಅಂತ ನೋಡ್ಕೋತಿರ್ತಿನಿ. ಬಿಗ್‌ಬಾಸ್ ಧ್ವನೀನ ಮಿಸ್ ಮಾಡ್ಕೋತೀನಿ. ಅವರ ಜೊತೆಗೆ ಫ್ಲರ್ಟ್ ಮಾಡಿದ್ದನ್ನು ಮಿಸ್ ಮಾಡ್ಕೋತೀನಿ. ಬೆಳಿಗ್ಗೆ ಸಾಂಗ್ಸ್ ಮಿಸ್ ಮಾಡ್ಕೋತೀನಿ. ಆ ಮನೆಯ ಒಂದೊಂದು ಮೂಲೆಯಲ್ಲಿ ಒಂದೊಂದು ಮೆಮರಿ ಇದೆ. ಅದನ್ನು ಕೇಳಿದ್ರೆ ಹೇಳೋಕೆ ಕಷ್ಟವಾಗತ್ತೆ.
ಕೊನೆದಾಗಿ ನಾನು ಬಿಗ್‌ಬಾಸ್‌ಗೆ ಹೇಳಬೇಕು, ‘ಬಿಗ್‌ಬಾಸ್, ನಾನು ನಿಮ್ ಧ್ವನಿಗೆ ಬಿದ್ದೋಗಿದೀನಿ. ಫಿದಾ ಆಗಿದೀನಿ. ನೀವು ಹೇಗಿದೀರಾ ನೋಡ್ಬೇಕು. ಹ್ಯಾಪಿಯೆಸ್ಟ್ ವರ್ಷನ್ ಆಫ್ ನಮ್ರತಾ ಇದು. ನನ್ನನ್ನು ನಾನು ಪ್ರೀತಿಸಲು ಶುರುಮಾಡಿದೀನಿ. ನೀವು ಕೊಟ್ಟ ಎಲ್ಲ ಸಿಚುವೇಷನ್ಗಳು ಪಾಠಗಳು ನನ್ನನ್ನು ಗಟ್ಟಿಗೊಳಿಸಿವೆ. ಇಲ್ಲಿ ಇಷ್ಟೊಂದು ಫೇಸ್ ಮಾಡಿದವಳು ಹೊರಗಡೆ ಏನು ಬೇಕಾದ್ರೂ ಫೇಸ್ ಮಾಡೋಕೆ ರೆಡಿ ಇದೀನಿ. ಥ್ಯಾಂಕ್ಯೂ ಸೋ ಮಚ್ ಬಿಗ್‌ಬಾಸ್!
ಇದನ್ನೂ ಓದಿ : ಬಿಗ್‌ಬಾಸ್ ಮನೆಯೊಳಗೆ ಬಾಕ್ಸಿಂಗ್ ಪಂಚ್ ಮತ್ತು ಪಂಚಿಂಗ್ ಡೈಲಾಗ್ಸ್..!