ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಸಂಸ್ಕೃತಿ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ನಾಡಹಬ್ಬ ದಸರಾ ಹೊತ್ತಿನಲ್ಲೇ ಬಿಂದಾಸ್ ರೇವ್ ಪಾರ್ಟಿ ನಡೆಸಲಾಗಿದ್ದು, ಈ ಸಂಬಂಧ 50ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅರಮನೆ ನಗರಿ ಮೈಸೂರಿಗೂ ರೇವ್ ಪಾರ್ಟಿ ಕಾಲಿಟ್ಟಿದ್ದು, ಪ್ರಖ್ಯಾತ ನಾಡಹಬ್ಬ ದಸರಾ ವೇಳೆಯೇ ನಶೆಯ ಆಟಾಟೋಪ ನಡೆಸಲಾಗುತ್ತಿತ್ತು. ನಗರದ ಹೊರವಲಯದಲ್ಲಿ ರೇವ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪೆಡೆದ ಪೊಲೀಸರು, ತಡರಾತ್ರಿ ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ನಶಾ ಲೋಕದಲ್ಲಿ ತೇಲಾಡುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು, ಪೊಲೀಸರ ದಾಳಿ ವೇಳೆ 15ಕ್ಕೂ ಹೆಚ್ಚು ಯುವತಿಯರು ಖಾಸಗಿ ಜಮೀನಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಉದ್ಯಮಿಗಳು, ವಿದ್ಯಾರ್ಥಿಗಳು, ಯುವತಿಯರೇ ಟಾರ್ಗೆಟ್ ಆಗಿದ್ದು, ಮೈಸೂರು ತಾಲೂಕಿನ ಮೀನಾಕ್ಷಿಪುರದ ಬಳಿ ಖಾಸಗಿ ಜಮೀನಿನಲ್ಲಿ ರೇವ್ ಪಾರ್ಟಿ ನಡೆಸಲಾಗುತ್ತಿತ್ತು. ಇಲವಾಲ PSI ಮಂಜುನಾಥ ನಾಯಕ್ ನೇತೃತ್ವದಲ್ಲಿ ರೇಡ್ ಮಾಡಿ 50ಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಯುವಕರನ್ನು ವಶಕ್ಕೆ ಪಡೆಯುವ ವೇಳೆ ತಪ್ಪಿಸಿಕೊಳ್ಳಲು ಕೆಲವರು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಓಡಿ ಹೋಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೂ ಪೊಲೀಸರು ತಮ್ಮ ಪಟ್ಟು ಸಡಿಲಿಸದೇ ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ – ಪಂದ್ಯ ಯಾವಾಗ?