ವಾಷಿಂಗ್ಟನ್ : ಅಮೆರಿಕದಲ್ಲಿ ‘ಹೆಲೆನ್’ ಚಂಡಮಾರುತದ ಆರ್ಭಟಕ್ಕೆ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಚಂಡಮಾರುತದಿಂದ ಫ್ಲೋರಿಡಾ ರಾಜ್ಯದ ರಾಜಧಾನಿ ತಲ್ಲಾಹಸ್ಸೀ ಬಳಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ರಸ್ತೆಗಳು, ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ಸಂಪೂರ್ಣ ನೆಲಸಮವಾಗಿವೆ. ಅಲ್ಲದೇ ಧಾರಾಕಾರ ಮಳೆಯಿಂದ ಹಲವಾರು ಪ್ರದೇಶಗಳು ಪ್ರವಾಹದಿಂದ ತತ್ತರಿಸಿ ಹೋಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕೆರೊಲಿನಾದಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದು, ಜಾರ್ಜಿಯಾ ಗವರ್ನರ್ ಬ್ರಿಯಾನ್ ಕೆಂಪ್ ತನ್ನ ರಾಜ್ಯದಲ್ಲಿ ರಕ್ಷಣಾ ಸಿಬ್ಬಂದಿಯೂ ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಲ್ಡೋಸ್ಟಾ ನಗರದಲ್ಲಿಯೂ 115ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿದ್ದು, ಅನೇಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಹೆಲೆನ್ ಚಂಡಮಾರುತ ಗುರುವಾರ ರಾತ್ರಿ 11:10ಕ್ಕೆ ಫ್ಲೋರಿಡಾ ಪ್ರದೇಶವನ್ನು ತಲುಪಿದ್ದು, ಈ ಪ್ರಬಲ ಚಂಡಮಾರುತಕ್ಕೆ ಸಾವಿರಾರು ಮರಗಳು ನೆಲಕ್ಕಚ್ಚಿವೆ. ಹಲವಾರು ದೋಣಿಗಳು ಹಾಗೂ ವಾಹನಗಳು ಮುಳುಗಿ ಹೋಗಿವೆ. ರಸ್ತೆಗಳು ಪ್ರವಾಹದಿಂದಾಗಿ ಜಲಾವೃತಗೊಂಡಿವೆ.
ಹೆಲೆನ್ ಚಂಡಮಾರುತದ ಪ್ರಭಾವ ಜಾರ್ಜಿಯಾ, ದಕ್ಷಿಣ ಕೆರೊಲಿನಾ, ಉತ್ತರ ಕೆರೊಲಿನಾ, ಟೆನ್ನೆಸ್ಸೀ ಮತ್ತು ವರ್ಜೀನಿಯಾ ರಾಜ್ಯಗಳವರೆಗೂ ವಿಸ್ತರಿಸಿದೆ. ಕೆಲವೆಡೆ ಎಂಟು ಅಡಿಗಳಷ್ಟು ಮಳೆ ನೀರು ನಿಂತುಕೊಂಡಿದೆ. ಆದರೆ ಫ್ಲೋರಿಡಾದ ಹಲವು ಪ್ರದೇಶದಲ್ಲಿ 15 ಅಡಿಗಿಂತ ಹೆಚ್ಚು ಮಳೆ ನೀರು ಆವೃತವಾಗಿದೆ.
ದೇಶದಾದ್ಯಂತ ವಿದ್ಯುತ್ ಕಡಿತವನ್ನು ಮೇಲ್ವಿಚಾರಣೆ ಮಾಡುವ ಮತ್ತು ದಾಖಲಿಸುವ ಕಂಪನಿಯಾದ PowerOutage.US ಪ್ರಕಾರ, ಅಮೆರಿಕಾದಾದ್ಯಂತ ಸುಮಾರು 4 ಮಿಲಿಯನ್ ಜನರಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ : ಮಾಜಿ ಮಂತ್ರಿ ಮುನಿರತ್ನ ಮನೆ, ಕಚೇರಿಗಳ ಮೇಲೆ SIT ರೇಡ್..!