ಬೆಂಗಳೂರು : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲದ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿದೆ. ಸಿದ್ದರಾಮಯ್ಯ ಅರ್ಜಿ ವಜಾಗೊಂಡಿದ್ದು, ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿಯಲ್ಲಿ ಸಂತಸ ಮನೆ ಮಾಡಿದೆ. ಮುಂದಿನ ಹೋರಾಟ ಪ್ರಕಟಕ್ಕೆ ಬಿಜೆಪಿ ಮುಂದಾಗಿದ್ದು, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತುರ್ತು ಸುದ್ದಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದ್ದು, ಕಳೆದ ಹಲವು ದಿನಗಳಿಂದ ಭ್ರಷ್ಟ ಕಾಂಗ್ರೆಸ್ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೀವಿ, ವಾಲ್ಮೀಕಿ ಹಗರಣದಂತೆ ಮುಡಾ ಹಗರಣದಲ್ಲಿ ಹೋರಾಟ ಮಾಡಿದ್ವಿ. ಸ್ವತಃ ಸಿಎಂ ಕುಟುಂಬವೇ ಭಾಗಿಯಾಗಿರುವಂತ, ಅವರೇ ಫಲಾನುಭವಿಗಳು. ಇದರ ವಿರುದ್ಧ ನಾವು ಬೆಂಗಳೂರಿಂದ ಮೈಸೂರಿನ ವರೆಗೆ ಪಾದಯಾತ್ರೆ ನಡೆಸಿದ್ವಿ. ಮೈಸೂರು ಚಲೋ ವನ್ನು ಜೆಡಿಎಸ್ ಜೊತೆ ಒಟ್ಟಾಗಿ ಪಾದಯಾತ್ರೆ ಯಶಸ್ವಿಯಾಗಿ ಮಾಡಿದ್ವಿ.
ನಮ್ಮ ಹೋರಾಟದ ಪರಿಣಾಮವಾಗಿ ಗವರ್ನರ್ ಅವರಿಗೆ ಅನೇಕ ಖಾಸಗಿ ವ್ಯಕ್ತಿಗಳು ದೂರು ಕೊಟ್ಟಿದ್ದರು. ಸಿಎಂ ವಿರುದ್ಧ ಆರೋಪ ಬಂದಾಗ ಗವರ್ನರ್ ತಮ್ಮ ವಿವೇಚನೆ ಬಳಸಿ ಆದೇಶ ಹೊರಡಿಸಿದ್ದಾರೆ. ಎಲ್ಲವನ್ನೂ ಆಧಾರವಾಗಿಟ್ಟುಕೊಂಡು, ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ರು.
ಈ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆದಿದ್ರು. ರಾಜಭವನವನ್ನ ರಾಜಕೀಯ ವಾಗಿ ಬಳಸಿಕೊಳ್ತಿದ್ದಾರೆಂದು ಗೂಬೆ ಕೂರಿಸಿದ್ರು. ಇವತ್ತು ರಾಜ್ಯದ ಉಚ್ಛ ನ್ಯಾಯಾಲಯದದಲ್ಲಿ ಸಿಎಂ ಚಾಲೆಂಜ್ ಮಾಡಿದ್ರು. ವಾದ-ಪ್ರತಿವಾದ ಆಲಿಸಿ ತೀರ್ಪನ್ನು ನೀಡಿದೆ. ಆ ತೀರ್ಪಿನಲ್ಲಿ ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿ, ಗವರ್ನರ್ ಕೊಟ್ಟ ಪ್ರಾಸಿಕ್ಯೂಷನ್ ಕಾನೂನು ಬದ್ದವಾಗಿದೆ ಎಂದು ಎತ್ತಿ ಹಿಡಿದಿದೆ.
ಕಾನೂನು ಎದುರು ಎಲ್ಲರು ಕೂಡ ಒಂದೇ ಹೈಕೋರ್ಟ್ ಹೇಳಿದೆ. ಸಿಎಂ ಸಿದ್ದರಾಮಯ್ಯಗೆ ನಾನು ಆಗ್ರಹ ಮಾಡ್ತೀನಿ. ಗವರ್ನರ್ ಮೇಲೆ ಆಪಾದನೆ ಮಾಡೋದನ್ನು ಬದಿಗೊತ್ತಿ, ಗವರ್ನರ್ ಆದೇಶವನ್ನು ಗೌರವಸಿಬೇಕು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು. ಅದರಂತೆ ಪಕ್ಷದ ನಾಯಕರ ಜೊತೆ ಕುಳಿತು ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡ್ತೀವಿ. ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು. ಒಂದು ತಿಂಗಳು, ಎರಡು ತಿಂಗಳು ಒಂದು ವಾರದ ಪ್ರಶ್ನೆ ಇಲ್ಲ. ಈ ನಾಡಿನ ಜನರ ಪರವಾಗಿ ಹಾಗೂ ಭ್ರಷ್ಟಾಚಾರ ವಿರುದ್ಧ ನಾವು ಹೋರಾಟ ಮಾಡಿದ್ವಿ. ನಾವು ಮಾಡಿದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ ಎಂದು ವಿಜಯೇಂದ್ರ ಬಣ್ಣಿಸಿದ್ದಾರೆ.
ಇನ್ನು ಸಿಎಂ ವಿರುದ್ಧ ಹೋರಾಟಕ್ಕೆ ಕರೆ ಕೊಟ್ಟ ಬಿ.ವೈ ವಿಜಯೇಂದ್ರ, ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುವ ಮೂಲಕ ಹೈಕೋರ್ಟ್ ತೀರ್ಪು ಜನರಿಗೆ ತಿಳಿಸಿ, ಸಿಎಂ ರಾಜೀನಾಮೆಗೆ ಒತ್ತಾಯಿಸುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ರಾಜೀನಾಮೆ ಕೊಡ್ತಾರಾ ಸಿಎಂ ಸಿದ್ದರಾಮಯ್ಯ? ಹೈ ತೀರ್ಪಿನ ಬೆನ್ನಲ್ಲೇ ಹೈಕಮಾಂಡ್ ಬುಲಾವ್..!