ಮೈಸೂರು : ಅದ್ದೂರಿ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಜಂಬೂ ಸವಾರಿಗಾಗಿ ಆನೆಗಳು ಕೂಡ ತಾಲೀಮು ನಡೆಸುತ್ತಿವೆ. ಆದರೆ ಶುಕ್ರವಾರ ರಾತ್ರಿ ಅರಮನೆ ಆವರಣದಲ್ಲಿ ಆನೆಗಳು ಗುದ್ದಾಡಿಕೊಂಡು ರಸ್ತೆಗೆ ಓಡಿ ಬಂದ ಪರಿಣಾಮ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದಸರಾ ಹಬ್ಬಕ್ಕೆ ತಾಲೀಮು ನಡೆಸುವ ಆನೆಗಳೇ ಜಗಳ ಆಡಿಕೊಂಡಿರುವುದು ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿತ್ತು.
ಹೌದು, ನಿನ್ನೆ ರಾತ್ರಿ 7:45ರ ಸಮಯದಲ್ಲಿ ಆನೆಗಳು ಊಟ ಮಾಡುವ ಸಂದರ್ಭದಲ್ಲಿ ಧನಂಜಯ ಹಾಗೂ ಕಂಜನ್ ಆನೆ ನಡುವೆ ಗುದ್ದಾಟ ಶುರುವಾಗಿದೆ. ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಏಕಾಏಕಿ ಕಂಜನ್ ಹಾಗೂ ಧನಂಜಯ ಆನೆಗಳು ಓಡುತ್ತಾ ಹೊರಬಂದಿದ್ದು, ಮಾವುತನಿಲ್ಲದ ಕಂಜನ್ ಆನೆಯನ್ನು ಧನಂಜಯ್ ಆನೆ ಅರಮನೆಯಿಂದ ಹೊರಗೆ ಓಡಿಸಿಕೊಂಡು ಬಂದಿದೆ.
ಎರಡೂ ಆನೆಗಳು ದೊಡ್ಡಕೆರೆ ಮೈದಾನದ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತೆಗೆ ನುಗ್ಗುತ್ತಿದ್ದಂತೆ ಜನರು ಭಯದಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ತಕ್ಷಣ ಜಾಗೃತರಾದ ಮಾವುತರು ಹಾಗೂ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಈ ಮೂಲಕ ಆಗಬೇಕಿದ್ದ ಭಾರಿ ಅನಾಹುತ ತಪ್ಪಿಸಿದ್ದಾರೆ. ಬಳಿಕ ಎರಡು ಆನೆಗಳನ್ನ ಮಾವುತರು ಮತ್ತೆ ಅರಮನೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ : ಚಿಕ್ಕೋಡಿ : ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಪುಂಡಾಟ ಮೆರೆದ ಯುವಕರು..!