ಬೆಂಗಳೂರು : ಬೆಂಗಳೂರಿನಲ್ಲಿ ಕಳೆದ ರಾತ್ರಿ ಅಲ್ಲಲ್ಲಿ ಭಾರೀ ಮಳೆಯಾಗಿದೆ. ಪರಿಣಾಮ ಇಂದು ಸಿಲಿಕಾನ್ ಸಿಟಿ ವಾತಾವರಣ ತಂಪಾಗಿದೆ. ಅದೇ ರೀತಿ ಇಂದೂ ಕೂಡ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಕಳೆದೆರೆಡು ದಿನಗಳಿಂದ ಸಂಜೆ ಆಗುತ್ತಿದ್ದಂತೆ ಕಪ್ಪು ಕಾರ್ಮೋಡ ಆವರಿಸುತ್ತಿದೆ. ಆದರೆ ನಿರೀಕ್ಷೆಯಂತೆ ಮಳೆಯಾಗುತ್ತಿಲ್ಲ. ಕಳೆದ ದಿನ (ಏಪ್ರಿಲ್ 15) ರಾತ್ರಿ ವೇಳೆ ಗುಡುಗು, ವೇಗವಾಗಿ ಗಾಳಿ ಬೀಸಿತಾದರೂ ಹೆಚ್ಚೇನು ಮಳೆಯಾಗಿಲ್ಲ. ಕೆಲವೆಡೆ ಜೋರು ಮಳೆಯಾದರೆ ಇನ್ನೂ ಹಲವೆಡೆ ಮಳೆಯೇ ಆಗಿಲ್ಲ. ಆದರೆ ಇಂದು-ನಾಳೆ ನಗರದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.

ಹೌದು ಇಂದು ಬೆಂಗಳೂರಿನಾದ್ಯಂತ ಗುಡುಗು ಮಿಂಚು ಗಾಳಿ ಸಮೇತ ಮಳೆಯಾಗಲಿದೆ. ಮಧ್ಯಾಹ್ನದವರೆಗೆ ಎಂದಿನಂತೆ ತಾಪಮಾನ ಇರಲಿದ್ದು ನಂತರ ಮಳೆ ಮೋಡ ಹೆಚ್ಚಾಗುವ ಸೂಚನೆ ನೀಡಲಾಗಿದೆ. ಸಂಜೆ ನಂತರ ಗಾಳಿಯ ವೇಗ ಅಧಿಕವಾಗಲಿದ್ದು, ಮರ ಗಿಡಗಳು ಮಾತ್ರವಲ್ಲದೆ ವಿದ್ಯುತ್ ಕಂಬಗಳು ಉರುಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಲು ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದಾದ್ಯಂತ ಎಲ್ಲೆಲ್ಲಿ ಮಳೆ? ಕರ್ನಾಟಕದ ಹಲವೆಡೆ ಇಂದು ಧಾರಾಕಾರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಹಾಸನ, ಮೈಸೂರು, ಶಿವಮೊಗ್ಗ್, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ಕೋಲಾರ, ತುಮಕೂರು, ಬೆಳಗಾವಿ, ಚಾಮರಾಜನಗರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆ ಇದೆ.
ಅದೇ ರೀತಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲೂ ಮಳೆ ಬೀಳುವ ಲಕ್ಷಣಗಳು ಇವೆ. ಇನ್ನೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅಂದರೆ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಹಾವೇರಿಯಲ್ಲಿ ಇಂದು ವರುಣ ತಂಪೆರೆಯುವ ಸಾಧ್ಯತೆಗಳು ಇವೆ. ಅಲ್ಲದೆ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಶಿವಮೊಗ್ಗ, ಕೊಡಗು ಈ ಎಲ್ಲಾ ಕಡೆ ಸಾಧಾರಣದಿಂದ ಹಗುರವಾಗಿ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ಕೊಟ್ಟಿದೆ.
ನಿನ್ನೆ ಬೆಂಗಳೂರಿನ ಯಾವ್ಯಾವ ಭಾಗದಲ್ಲಿ ಎಷ್ಟು ಮಳೆಯಾಗಿದೆ?
- ಹೊಯ್ಸಳ ನಗರ – 21.5ಮಿ.ಮೀ
- ಪೀಣ್ಯ ಇಂಡಸ್ಟ್ರಿಯಲ್ – 20 ಮಿ.ಮೀ
- ಸಂಪಂಗಿ ರಾಮನಗರ – 14.5 ಮಿ.ಮೀ
- ದೊಡ್ಡ ಬಿದರಕಲ್ಲು -10ಮಿ.ಮೀ
- ಹಂಪಿನಗರ – 10ಮಿ.ಮೀ
ಇದನ್ನೂ ಓದಿ : ಅತ್ತ ಜಾತಿಗಣತಿ ವರದಿಗೆ ಒಕ್ಕಲಿಗರು, ಲಿಂಗಾಯತರ ವಿರೋಧ – ಇತ್ತ ಹಿಂದುಳಿದ ಸಮುದಾಯದಿಂದ ಭಾರೀ ಬೆಂಬಲ.. ಸುದ್ದಿಗೋಷ್ಠಿ!







