ಬೆಂಗಳೂರು : ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಮಗಳು ಭೀಕರವಾಗಿ ಹತ್ಯೆಗೈದ ಘಟನೆ ನಗರದ ಹೊಂಗಸಂದ್ರದಲ್ಲಿ ನಡೆದಿದೆ. 46 ವರ್ಷದ ಜಯಲಕ್ಷ್ಮಿ ಮೃತ ತಾಯಿ. ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪವಿತ್ರಾ ಎಂಬಾಕೆ ತನ್ನ ಪ್ರಿಯಕರ ನವಲೀಶ್ ಎಂಬುವನ ಜೊತೆ ಸೇರಿ ತಾಯಿಯ ಜೀವವನ್ನೇ ತೆಗೆದು ಹಾಕಿದ್ದಾಳೆ. ಮೃತ ಜಯಲಕ್ಷ್ಮಿ ಅವರು 12 ವರ್ಷದ ಹಿಂದೆ ಸುರೇಶ್ ಎಂಬಾತನೊಂದಿಗೆ ಮಗಳ ಮದುವೆ ಮಾಡಿದ್ದರು. ಸುರೇಶ್ ದಿನಸಿ ಅಂಗಡಿ ನಡೆಸುತ್ತಿದ್ದ. ಇವರಿಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಪವಿತ್ರಾ, ನವಲೀಶ್ ಎಂಬವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.
ತಮಿಳುನಾಡು ಮೂಲದವನಾಗಿದ್ದ ನವಲೀಶ್, ಪವಿತ್ರಾ ವಾಸವಿದ್ದ ಮನೆಗೆ ಬಾಡಿಗೆಗೆ ಬಂದಿದ್ದ. ಗಂಡ ಅಂಗಡಿಗೆ ಹೋಗ್ತಿದ್ದಂತೆ ಪವಿತ್ರಾ ಮನೆಗೆ ನವಲೀಶ್ ಬರ್ತಿದ್ದ. ಇದನ್ನ ಗಮನಿಸಿದ ತಾಯಿ ಜಯಲಕ್ಷ್ಮಿ ಹಲವು ಬಾರಿ ಮಗಳು ಪವಿತ್ರಾಗೆ ವಾರ್ನಿಂಗ್ ಕೊಟ್ಟಿದ್ದರು. ಸೆ.11ನೇ ತಾರೀಖು ಮನೆಯಲ್ಲಿ ಯಾರು ಇಲ್ಲದ ವೇಳೆ ಪವಿತ್ರಾ ತನ್ನ ಪ್ರಿಯಕರನ ಜೊತೆ ರೂಂಗೆ ಸೇರಿಕೊಂಡಿದ್ದರು.
ಇದನ್ನು ನೋಡಿದ ತಾಯಿ ಜಯಲಕ್ಷ್ಮಿ ಮಗಳನ್ನು ಪ್ರಶ್ನಿಸಿದ್ದಾರೆ. ಆಗ ಇಬ್ಬರ ಜೊತೆ ಮನೆಯಲ್ಲಿ ಗಲಾಟೆ ನಡೆದಿದೆ. ಕೊನೆಗೆ ಮಗಳು ಹಾಗೂ ಪ್ರಿಯಕರ ನವಲೀಶ್ ಪಕ್ಕದಲ್ಲೇ ಇದ್ದ ಟವಲ್ನಿಂದ ಜಯಲಕ್ಷ್ಮಿ ಅವರ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ಜಯಲಕ್ಷ್ಮಿ ಸಾವನ್ನಪ್ಪಿದ ಬಳಿಕ ಬಾತ್ ರೂಂನಲ್ಲಿ ಬಿದ್ದು ಸತ್ತಿದ್ದಾರೆ ಎಂದು ಪವಿತ್ರಾ ನಾಟಕ ಮಾಡಿದ್ದಾರೆ. ಆದರೆ ಮೃತದೇಹ ನೋಡಿದ ಪೊಲೀಸರಿಗೆ ಅನುಮಾನ ಬಂದಿದೆ. ಪೋಸ್ಟ್ ಮಾರ್ಟಮ್ ವೇಳೆ ಉಸಿರುಗಟ್ಟಿಸಿ ಪ್ರಾಣ ತೆಗೆದಿರುವುದು ದೃಢವಾಗಿದೆ.
ಪೋಸ್ಟ್ ಮಾರ್ಟಮ್ ವರದಿ ಬಂದ ಮೇಲೆ ಬೊಮ್ಮನಹಳ್ಳಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ನಂತರ ಪವಿತ್ರಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭೀಕರ ಘಟನೆಯ ರಹಸ್ಯ ಬಾಯ್ಬಿಟ್ಟಿದ್ದಾರೆ. ಪವಿತ್ರಾ ಮತ್ತು ಪ್ರಿಯಕರ ನವಲೀಶ್ನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಗುಂಡಿಕ್ಕಿ ಮಾಜಿ ಗ್ರಾಮ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ..!