ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ನ್ಯಾಯಾಂಗ ಬಂಧನ ಅವಧಿ ಇಂದು ಮುಕ್ತಾಯವಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಪೊಲೀಸರು ಕೋರ್ಟ್ಗೆ 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿರುವ ಕಾರಣ, ದರ್ಶನ್ ಜಾಮೀನಿಗಾಗಿ ಇಂದು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಈ ಬೆನ್ನಲ್ಲೇ ನಟ ದರ್ಶನ್ ಹೈಕೋರ್ಟ್‌ಗೆ ರಿಟ್ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸದಂತೆ ಆದೇಶ ನೀಡಲು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಹಲವು ಆಘಾತಕಾರಿ ಅಂಶಗಳು ಇರುವ ಸಾಧ್ಯತೆಯಿದ್ದು, ಈಗಾಗಲೇ ಹಲವು ವಿಚಾರಗಳು ಬಹಿರಂಗವಾಗಿವೆ. ರೇಣುಕಾಸ್ವಾಮಿಯ ಫೋಟೊಗಳು ಕೂಡ ಬಹಿರಂಗವಾಗಿದ್ದು, ಫೋಟೊ ನೋಡಿದವರು ದರ್ಶನ್ ಮಾಡಿದ ಕೃತ್ಯವನ್ನು ಟೀಕಿಸಿದ್ದರು. ಹೀಗಾಗಿ ಚಾರ್ಜ್‌ಶೀಟ್ ಮಾಹಿತಿ ಬಹಿರಂಗ ಪಡಿಸದಂತೆ, ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಚಾರ್ಜ್‌ಶೀಟ್‌ನಲ್ಲಿರುವ ಮಾಹಿತಿಗಳು ಬಹಿರಂಗವಾದರೆ ತಮ್ಮ ಮೇಲೆ ಇನ್ನಷ್ಟು ಕೆಟ್ಟ ಅಭಿಪ್ರಾಯ ಮೂಡಬಹುದು ಎನ್ನುವ ಕಾರಣಕ್ಕೆ ಚಾರ್ಜ್‌ಶೀಟ್‌ನಲ್ಲಿರುವ ವಿಚಾರಗಳನ್ನು ಬಹಿರಂಗಪಡಿಸದಂತೆ ದಾಸ ಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ರನ್ನು ಬಂಧಿಸಿ ಮೂರು ತಿಂಗಳಾಗಿದೆ. ಎರಡು ತಿಂಗಳು ಪರಪ್ಪನ ಅಗ್ರಹಾರದಲ್ಲಿದ್ದ ದಾಸನನ್ನು ಈಗ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ : ಬೆಂಗಳೂರು : ಬಾವನನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಬಾಮೈದ..!