ಬೆಂಗಳೂರು : ರಾಜ್ಯದ ಏಳು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲಿರುವ ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ’ಗೆ ಇಂದು (ಸೆ.6) ಮಧ್ಯಾಹ್ನ 12 ಗಂಟೆಗೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಯೋಜನೆ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಭೋಸರಾಜು ಸೇರಿ ಹಲವು ಸಚಿವರು ಉಪಸ್ಥಿತರಲಿದ್ದಾರೆ. ಶಾಸಕರಾದ ಶಿವಲಿಂಗೇಗೌಡ, ಸಿಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್ ಸೇರಿ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಶಾಸಕರು ಭಾಗಿಯಾಗಲಿದ್ದಾರೆ.
ಪಶ್ಚಿಮ ಘಟ್ಟ ಭಾಗದಿಂದ 7 ಬಯಲುಸೀಮೆ ಜಿಲ್ಲೆಗಳಿಗೆ ನೀರು ಒದಗಿಸುವ ಮಹತ್ವದ ಯೋಜನೆ ಇದಾಗಿದ್ದು, 527 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಈಗಾಗಲೇ ಡಿಸಿಎಂ ಡಿಕೆಶಿವಕುಮಾರ್ ಸಕಲೇಶಪುರದ ದೊಡ್ಡನಾಗರ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಕಲ್ಪ ಪೂಜೆ ಕೂಡ ನೆರವೇರಿದ್ದು, ದೊಡ್ಡ ನಾಗರದ ಡಿಸಿ – 3 ಸೆಂಟರ್ನಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ದೀಕ್ಷಿತ್ ಗುರೂಜಿ ಅವರಿಂದ ಪೂಜೆ ನಡೆದಿದೆ.
ಸಕಲೇಶಪುರ ತಾಲ್ಲೂಕಿನಲ್ಲಿ ಎಂಟು ಕಡೆಗಳಲ್ಲಿ ನೀರು ಹರಿಯುವ ಹಳ್ಳಗಳಿಗೆ ಅಡ್ಡಲಾಗಿ ವಿಯರ್ ನಿರ್ಮಾಣ ಮಾಡಲಾಗಿದೆ. ಈ ಎಂಟು ವಿಯರ್ ಗಳ ನೀರನ್ನ ಶೇಕರಣೆ ಮಾಡಲು 3 ವಿತರಣಾ ತೊಟ್ಟಿಗಳನ್ನ (Delivery Chamber-3) ನಿರ್ಮಾಣ ಮಾಡಲಾಗಿದೆ. ಎಂಟು ವಿಯರ್ಗಳ ನೀರು ದೊಡ್ಡ ನಾಗರ ಬಳಿಯ DC- 3 ಸೆಂಟರ್ ಪಂಪ್ ಹೌಸ್ ಬಂದು ಶೇಖರಣೆ ಆಗಲಿದೆ. ನಂತರ ಡಿಸಿ – 3 ಪಂಪ್ ಹೌಸ್ ನಿಂದ 50 ಮೀಟರ್ ಎತ್ತರಕ್ಕೆ ವಾಟರ್ ಲಿಫ್ಟ್ ಮಾಡಿ ಹೆಬ್ಬನಹಳ್ಳಿ ಡಿಸಿ – 4 ಸೆಂಟರ್ಗೆ ಸಾಗಿಸಲಾಗುತ್ತದೆ. ನಂತರ ಡಿಸಿ – 4 ರಿಂದ 7 ಜಿಲ್ಲೆಗಳಿಗೆ ಕೆನಲ್ ಮೂಲಕ ನೀರು ಹರಿಸಲಾಗುತ್ತದೆ. ಈ ಕೆನಲ್ 7 ಜಿಲ್ಲೆಗಳಲ್ಲೂ ಹಾದು ಹೋಗಲಿದ್ದು 262 ಕಿಲೋಮೀಟರ್ ಇದೆ. 262 ಕಿಲೋಮೀಟರ್ ನಂತರ ಕೆನಲ್ ನಿಂದ ಪೈಪ್ ಲೈನ್ ಮೂಲಕ ಹಳ್ಳಿಗಳಿಗೆ ನೀರು ಸಾಗಲಿದೆ. ಈ ಯೋಜನೆಯನ್ನ 2026-27ನೇ ಸಾಲಿನಲ್ಲಿ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರು : ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿ ಜೊತೆ ಆಟೋ ಚಾಲಕನ ಗುಂಡಾವರ್ತನೆ – ವಿಡಿಯೋ ವೈರಲ್..!