ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ಕನ್ನಡದಲ್ಲಿ ಯಶಸ್ವಿಯಾಗುತ್ತಿವೆ. ಅದೇ ತರಹದ ಒಳ್ಳೆಯ ಕಂಟೆಂಟ್ ಹೊತ್ತು ಬರುತ್ತಿರುವ ಸಿನಿಮಾ ‘ತದ್ವಿರುದ್ಧ’. ಇತ್ತೀಚೆಗೆ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವಚ್ಛ ಕನ್ನಡದ ಮಾತಿನಿಂದ ಹಾಗೂ ತಮ್ಮ ಅಮೋಘ ಅಭಿನಯದಿಂದ ಜನಪ್ರಿಯರಾಗಿರುವ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಸುಮನ್ ರಂಗನಾಥ್ ಹಾಗೂ ವಿಕ್ರಮ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಚಾರ್ಮಿಯನ್ ಮೋಷನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ವಿನೋದ್ ಜೆ ರಾಜ್ ನಿರ್ದೆಶಿಸಿದ್ದಾರೆ.
ನಿರ್ದೇಶಕ ವಿನೋದ್ ಜೆ ರಾಜ್ ಅವರು “ತದ್ವಿರುದ್ಧ” ಎಂಬ ಶೀರ್ಷಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. “ಯಶೋಗಾಥೆ” ಎಂಬ ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರ “ತದ್ವಿರುದ್ಧ”. ವಾಸ್ತವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೆ “ತದ್ವಿರುದ್ಧ”, ಇದೊಂದು 90 ಕಾಲಘಟ್ಟದಲ್ಲಿ ನಡೆಯುವ ಕಥೆ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರವಾದರೂ ಕ್ರೌರ್ಯವನ್ನು ವೈಭವಿಕರಿಸಿಲ್ಲ. ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ಸೇರಿದಂತೆ ಐದು ಮುಖ್ಯಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಸಕಲೇಶಪುರದಲ್ಲೇ ಪೂರ್ತಿ ಚಿತ್ರೀಕರಣ ನಡೆದಿದೆ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರು ಸಹಕಾರ ನೀಡಿದ್ದಾರೆ. ಹಾಡಿಲ್ಲದ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತವೇ ಹೈಲೆಟ್ ಎನ್ನುತ್ತಾರೆ. ಕಥೆ, ಚಿತ್ರಕಥೆ, ಛಾಯಾಗ್ರಹಣ, ಸಂಕಲನದ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಯಾಗಿ ನಿಭಾಯಿಸಿರುವ ನಿರ್ದೇಶಕರು ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ.
ನಿರ್ದೇಶಕರು ಹೇಳಿದ ತಕ್ಷಣ ಕಥೆ ಇಷ್ಟವಾಯಿತು. ನನ್ನ ಪಾತ್ರ ಚೆನ್ನಾಗಿದೆ. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಎಲ್ಲರೂ ನಮ್ಮ ಚಿತ್ರವನ್ನು ನೋಡಿ ಎಂದು ನಟಿ ಸುಮನ್ ರಂಗನಾಥ್ ಹೇಳಿದರು.
ಹೊಸಚಿಗುರು ಹಳೇ ಬೇರು ಸಮ್ಮಿಶ್ರಣ ಈ ಚಿತ್ರ ಎಂದು ಮಾತನಾಡಿದ ನಟ ಸುಚೇಂದ್ರ ಪ್ರಸಾದ್, ಸಿದ್ದ ಸೂತ್ರಗಳನ್ನು ಪಕ್ಕಕ್ಕಿರಿಸಿ ಮಾಡಿರುವ ಚಿತ್ರವಿದು. ಹಾಗಾಗಿ ಸ್ವಲ್ಪ ಈ ಚಿತ್ರ ಭಿನ್ನ. ಸಿನಿಮಾ ತಂತ್ರವನ್ನು ಬಿಟ್ಟು ಬೇರೆ ಯಾವ ತಂತ್ರಗಾರಿಕೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಹೇರಿಲ್ಲ ಹಾಗಾಗಿ ಇದು ವಿಭಿನ್ನ ಅಂತಲೂ ಹೇಳಬಹುದು. ಈ ವಿಭಿನ್ನ ಕಥೆ ಯ ಈ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ ಎಂದರು.
ಚಿತ್ರದಲ್ಲಿ ಅಭಿನಯಿಸಿರುವ ವಿಕ್ರಮ್, ಐಶ್ವರ್ಯ ಬಿ ಶೆಟ್ಟಿ, ಸುವಿನ ಗೌಡ, ಪೂಜಾ ಗೌಡ, ಅಭಿಲಾಶ್ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಕೆ.ಆರ್ ರವಿಚಂದ್ರ, ಐಶ್ವರ್ಯ ಬಿ ಶೆಟ್ಟಿ ಚಿತ್ರದ ಕುರಿತು ಮಾತನಾಡಿದರು. ಚಾರ್ಮಿಯನ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ಇದನ್ನೂ ಓದಿ : ಬಾಗಲಕೋಟೆ : ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕದಿಯುತ್ತಿದ್ದ ಖತರ್ನಾಕ್ ಕಳ್ಳಿಯರ ಗ್ಯಾಂಗ್ ಅಂದರ್..!