ಬೆಂಗಳೂರು : ರಾಜ್ಯದಲ್ಲಿ ಮಾರಕ ಝೀಕಾ ವೈರಸ್ಗೆ ಮೊದಲ ಬಲಿಯಾಗಿದ್ದು, ಶಿವಮೊಗ್ಗದಲ್ಲಿ ಜೀಕಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ 73 ವರ್ಷದ ವೃದ್ಧರೊಬ್ಬರು ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಝೀಕಾ ವೈರಸ್ ಲಕ್ಷಣಗಳಿದ್ದ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋಮಾರ್ಬಿಟಿಸ್ ಇದ್ದು, ಜೊತೆಗೆ ಝೀಕಾ ವೈರಸ್ ಅಟ್ಯಾಕ್ ಆಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಇದುವರೆಗೂ ಒಟ್ಟು 9 ಜೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 3, ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಿಗೆ ಜೀಕಾ ವೈರಸ್ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಜೀಕಾ ವೈರಸ್ ಪತ್ತೆಯಾದವರಲ್ಲಿ ಒಬ್ಬರು ಗರ್ಭಿಣಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ.
ಗರ್ಭಿಣಿಯರ ಮೇಲೆ ಹೆಚ್ಚಿನ ನಿಗಾ ಇಡಲು ಇಲಾಖೆ ಸೂಚನೆ ನೀಡಿದ್ದು, ರೋಗಿಗಳ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸಲು ತಯಾರಿ ನಡೆಸಲಾಗಿದೆ. ಜಿಗಣಿ ಪ್ರದೇಶದ ಸುತ್ತಮುತ್ತ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರು : ಹೆಂಡತಿಯ ಹತ್ಯೆಗೈದು ಮನೆಯ ಬಾತ್‌ರೂಂನಲ್ಲಿ ಪೆಟ್ರೋಲ್ ಸುರಿದು ಸುಟ್ಟ ಪತಿ.