ಬೆಂಗಳೂರು : ಇಂದು ನಿಗದಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ಮಂತ್ರಾಲಯ ಭೇಟಿ ಕಾರ್ಯಕ್ರಮ ರದ್ದಾಗಿದೆ. ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಪ್ರಾಸಿಕ್ಯೂಷನ್ ವಿರುದ್ಧ ಸಿಎಂ ಸಿದ್ದು ಪರ ವಕೀಲರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಹಾಗಾಗಿ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯ ಅವರು ರದ್ದು ಮಾಡಿದ್ದಾರೆ.
ರಾಜ್ಯಪಾಲರ ನಿರ್ಧಾರ ಖಂಡಿಸಿ ಪ್ರತಿಭಟನೆ ಹಿನ್ನೆಲೆ, ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗದಿರಲು ಸಿಎಂ ಸಿದ್ದು ನಿರ್ಧರಿಸಿದ್ದಾರೆ. ಬಳ್ಳಾರಿ ಜಿಲ್ಲಾ ಪ್ರವಾಸವನ್ನು ರದ್ದು ಮಾಡಿಕೊಂಡಿರುವ ಸಿಎಂ, ಪಕ್ಷದ ಮುಖಂಡರು, ಕಾನೂನು ತಜ್ಞರ ಜೊತೆ ರಿಟ್ ಅರ್ಜಿ ಸಂಬಂಧ ಸಮಾಲೋಚನೆ ನಡೆಸಿದ್ದಾರೆ. ಇಂದು ಹೈಕೋರ್ಟ್‌ನಲ್ಲಿ ಸಿಎಂ ಪರವಾಗಿ ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಅರ್ಜಿ ಸಲ್ಲಿಸಲಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಸಲು ಸಿಎಂ ಪರ ವಕೀಲರು ಅಪ್ಲಿಕೇಷನ್ ರೆಡಿ ಮಾಡಿದ್ದು, ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನೆ ಮಾಡಿ ಇಂದು ಹೈಕೋರ್ಟ್‌ನಲ್ಲಿ ವಾದ ಮಂಡಿಸಲಿದ್ದಾರೆ. ಪ್ರಾಸಿಕ್ಯೂಷನ್‌ಗೆ ಕೊಡಲು ಗೈಡ್ಲೈನ್ಗಳನ್ನೇ ಪಾಲಿಸಿಲ್ಲ, ಸಂವಿಧಾನ ಬಾಹಿರವಾಗಿ ಅನುಮತಿ ನೀಡಿದ್ದಾರೆಂದು ವಾದಕ್ಕೆ ತಯಾರಿ ಮಾಡಿಕೊಂಡಿದ್ದಾರೆ.
ಸದ್ಯ ರಾಜ್ಯದಲ್ಲಿ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಭಾರಿ ಕೂತುಹಲಕ್ಕೆ ಕಾರಣವಾಗಿದೆ. ಇಂದು ಹೈಕೋರ್ಟ್‌ನಲ್ಲಿ ಹೈವೋಲ್ಟೇಜ್ ವಾದ-ಪ್ರತಿವಾದ ನಡೆಯಲಿದ್ದು, ಹಾಗಾಗಿ ಹೈಕೋರ್ಟ್ನತ್ತವೇ ಇಡೀ ರಾಜ್ಯ ರಾಜಕಾರಣದ ಚಿತ್ತ ನೆಟ್ಟಿದೆ.
ಇದನ್ನೂ ಓದಿ : ರಾಜ್ಯಪಾಲರ ವಿರುದ್ಧ ಸಿಡಿದೆದ್ದ ‘ಕೈ’ ಪಡೆ – ಪ್ರಾಸಿಕ್ಯೂಷನ್ ಖಂಡಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ..!