ಬಳ್ಳಾರಿ : ಕಳೆದ ಕೆಲ ವರ್ಷಗಳ ಕಾಲ ಸೈಲೆಂಟ್ ಆಗಿದ್ದ ಬಳ್ಳಾರಿಯ ಗಣಿ ಲೂಟಿ ಪ್ರಕರಣವು ಮತ್ತೆ ಮುನ್ನಲೆಗೆ ಬಂದಿದೆ. ಇದೀಗ ಗಣಿ ನಾಡು ಬಳ್ಳಾರಿಯಲ್ಲಿ ಬರೋಬ್ಬರಿ 1 ಸಾವಿರ ಕೋಟಿ ರೂ. ಮೌಲ್ಯದ ಸೂಪರ್ ಕ್ವಾಲಿಟಿ ಅದಿರು ಅಕ್ರಮವಾಗಿ ಸಾಗಣೆಯಾಗಿರುವ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಈ ಬೃಹತ್ ಲೂಟಿಯ ಹಿಂದೆ ಓರ್ವ ಪ್ರಭಾವಿ ರಾಜಕಾರಣಿಯ ಪುತ್ರ ಮತ್ತು ಆತನ ಸಹಚರನ ಕೃಪಾಕಟಾಕ್ಷ ಇದ್ದು, ಗಣಿ ದೋಚಲು ಪ್ರಭಾವಿ ರಾಜಕಾರಣಿ ಪುತ್ರನಿಗೆ ಚಂದ್ರು ಎಂಬಾತ ಸಾಥ್ ನೀಡಿದ್ದಾನೆ.

ಈ ಚಂದ್ರು ಎಂಬಾತನೇ 1 ಸಾವಿರ ಕೋಟಿ ಅದಿರು ಲೂಟಿಯ ಕಿಂಗ್ ಪಿನ್ ಆಗಿದ್ದು, ರಾಜಕಾರಣಿ ಪುತ್ರ & ಚಂದ್ರು ಜೊತೆ ಮೈನಿಂಗ್ ಕಂಪನಿಗಳೂ ಸೇರಿ ಲೂಟಿ ಮಾಡಿದೆ. ‘ಸುವಾನ್ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಗೆ ಮೈನಿಂಗ್ ಪರ್ಮಿಷನ್ ಇದೆ. ಬಳ್ಳಾರಿಯಲ್ಲಿ ಮೈನಿಂಗ್ ಮಾಡುವ ಸುವಾನ್ ಕಂಪನಿ ಗೋವಾಕ್ಕೆ ಅದಿರು ಸಾಗಿಸುತ್ತೆ. ಬಳ್ಳಾರಿಯ ಬನ್ನಿಹಟ್ಟಿ ರೈಲು ನಿಲ್ದಾಣದ ಮೂಲಕ ಗೋವಾಗೆ ಗಣಿ ಅದಿರು ಸಾಗಾಟ ಮಾಡಿದೆ. ‘ಮಾಂಡವಿ ರಿವರ್ ಪೆಲೆಟ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಗೆ ಅದಿರು ಸಾಗಿಸಬೇಕಿತ್ತು. ಆದ್ರೆ ಈ ಗಣಿ ಅದಿರನ್ನು ಲೂಟಿಕೋರರು ಬನ್ನಿಹಟ್ಟಿ ರೈಲು ನಿಲ್ದಾಣದಲ್ಲೇ ಬಿಡ್ತಾರೆ. ತಾವು ತಂದ ಗಣಿ ಅದಿರು ಸಾಗಿಸದೇ ರೈಲ್ವೇ ಸ್ಟೇಷನ್ನಲ್ಲಿದ್ದ ಹಳೇ ಗಣಿ ಅದಿರು ಸಾಗಿಸ್ತಾರೆ. ಹಲವು ವರ್ಷಗಳ ಹಿಂದೆ ಗಲಾಟೆಯಾಗಿಟ್ಟಿದ್ದ ಸೂಪರ್ ಕ್ವಾಲಿಟಿ, ಚಿನ್ನದ ಅದಿರು ಸಾಗಿಸ್ತಾರೆ.

ಇನ್ನು ಕಡಿಮೆ ಗುಣಮಟ್ಟದ ಅದಿರು ಅಲ್ಲೇ ಬಿಟ್ಟು ಉತ್ತಮ ಕ್ವಾಲಿಟಿಯ ಗಣಿ ಅದಿರು ಸಾಗಾಟ ಮಾಡ್ತಿದ್ದಾರೆ. ರೈಲ್ವೇ ಸ್ಟೇಷನ್ನಲ್ಲಿದ್ದ ಗಣಿ ಮೇಲೆ ಬೆಳೆದಿದ್ದ ಗಿಡಗಂಟೆ ಕಿತ್ತೆಸೆದು ಅಕ್ರಮವಾಗಿ ಸಾಗಾಟ ಮಾಡಿದ್ದು, ಕಡಿಮೆ ಮೌಲ್ಯದ ಗಣಿ ಅದಿರು ಬಿಟ್ಟು ಸಾವಿರಾರು ಕೋಟಿ ಬೆಲೆಯ ಗಣಿ ಅದಿರು ಸಾಗಿಸ್ತಾರೆ. ಲೂಟಿಕೋರರು ಅಕ್ರಮವಾಗಿ ಹಲವು ಬಾರಿ ಚಿನ್ನದ ಬೆಲೆಯ ಗಣಿ ಅದಿರು ಕದ್ದು ಸಾಗಿಸಿದ್ದು, ಬಳ್ಳಾರಿಯ ಪ್ರಭಾವಿ ರಾಜಕಾರಣಿ ಪುತ್ರ & ಚಂದ್ರು ಎಂಬಾತನಿಂದ ಈ ಗಣಿ ಲೂಟಿ ಹಗರಣ ನಡೆದಿದೆ.

ಗಣಿ ಇಲಾಖೆಯ ಡೆಪ್ಯುಟಿ ಡೈರೆಕ್ಟರ್, ಖಡಕ್ ಅಧಿಕಾರಿ ದ್ವಿತೀಯಾ ಇ.ಸಿ ಅವರು ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ ಮೌಲ್ಯದ ಗಣಿ ಅದಿರು ಲೂಟಿ ಪ್ರಕರಣವನ್ನು ಪತ್ತೆ ಹಚ್ಚಿ, ಪ್ರಭಾವಿಗಳ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಅಕ್ರಮ ಗೊತ್ತಾದ ತಕ್ಷಣವೇ, ಅಧಿಕಾರಿ ದ್ವಿತೀಯಾ ಇ.ಸಿ ಅವರು ಪೊಲೀಸರ ಸಹಾಯವಿಲ್ಲದೇ ಖುದ್ದು ಪರಿಶೀಲನೆ ನಡೆಸಿದ್ದಾರೆ. ಗಣಿ ಅದಿರು ಸಾಗಿಸುವ ಕಂಪನಿಗಳು ಕಡಿಮೆ ಬೆಲೆಯ ಅದಿರಿನ ಬದಲಿಗೆ ಹಳೇ ಕಾಲದ, ಅತ್ಯಂತ ಬೆಲೆಬಾಳುವ ಚಿನ್ನದ ಅದಿರನ್ನು ಅಕ್ರಮವಾಗಿ ಸಾಗಿಸಿರುವುದು ಪತ್ತೆಯಾಗಿದೆ. ಕೂಡಲೇ ರೈಲ್ವೇ ಸ್ಟೇಷನ್ಗೆ ತೆರಳಿ ಅಲ್ಲಿನ ಮಾಸ್ಟರ್ ಬಳಿ ಗಲಾಟೆ ಮಾಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಈ ಭ್ರಷ್ಟಾಚಾರದ ಕುರಿತು ದ್ವಿತೀಯಾ ಇ.ಸಿ ಅವರು ಸ್ವತಃ ಖಾಸಗಿ ದೂರು ಸಲ್ಲಿಸಿದ್ದಾರೆ. ಸುವಾನ್ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮಾಂಡವಿ ರಿವರ್ ಪೇಲ್ಲೆಟ್ಸ್ ಕಂಪನಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಸಂಡೂರು ಕೋರ್ಟ್ನಲ್ಲಿ PCR ನಂಬರ್ 150/2025 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಬಳ್ಳಾರಿಯ ಪ್ರಭಾವಿ ರಾಜಕಾರಣಿ ಪುತ್ರ ಹಾಗೂ ಚಂದ್ರು ಎಂಬಾತನ ವಿರುದ್ಧ ಕಾನೂನು ಸಮರ ಆರಂಭಿಸಿದ್ದಾರೆ. ದೂರು ದಾಖಲಿಸುವಾಗ ದ್ವಿತೀಯಾ ಇ.ಸಿ ಅವರು ಸಲ್ಲಿಸಿದ ದಾಖಲೆಗಳು ಈ ಹಗರಣದ ‘ಭಗವದ್ಗೀತೆ’ಯಾಗಿದೆ ಎಂದು ಹೇಳಲಾಗಿದ್ದು, ಪ್ರತಿ ಪುಟದಲ್ಲೂ ಲೂಟಿಯ ಇಂಚಿಂಚೂ ಮಾಹಿತಿ ಇದೆ. BTV ಬಳಿ 1 ಸಾವಿರ ಕೋಟಿ ಮೌಲ್ಯದ ಗಣಿ ಅದಿರು ಲೂಟಿಯ ಎಕ್ಸ್ಕ್ಲೂಸಿವ್ ದಾಖಲೆಗಳಿವೆ. ಪ್ರತಿ ಪುಟದಲ್ಲೂ ಲೂಟಿಕೋರರು ಮಾಡಿರುವ ಅಕ್ರಮದ ಇಂಚಿಂಚೂ ಮಾಹಿತಿ ಇದೆ.

ಕಳೆದ ನವೆಂಬರ್ 3 ರಂದೇ ದೂರು ನೀಡಿದ್ದರೂ, ಡಿಸೆಂಬರ್ 7 ಆದರೂ ಸರ್ಕಾರದ ಬೇರೆ ಇಲಾಖೆಗಳಾದ ರೈಲ್ವೇ ಇಲಾಖೆ, ಗಣಿ ಇಲಾಖೆಯ ಹಿರಿಯ ಅಧಿಕಾರಿಗಳೇ ದ್ವಿತೀಯಾ ಇ.ಸಿ ಅವರಿಗೆ ಸಹಾಯ ಮಾಡುತ್ತಿಲ್ಲ. ಸದ್ಯದ ಮಾಹಿತಿ ಪ್ರಕಾರ, ಲೂಟಿ ಮಾಡಿದ ಅಸಲಿ ಅದಿರು ವಾಪಸ್ ತಂದು ರೈಲ್ವೇ ನಿಲ್ದಾಣದ ರೇಕ್ನಲ್ಲಿ ಸುರಿಯಲಾಗಿದೆ. ಇದರಿಂದ ಈಗ ಅಲ್ಲಿ ಅಸಲಿ ಮಾಲು ಮತ್ತು ನಕಲಿ ಮಾಲು ಎರಡೂ ಇದ್ದು, ತನಿಖೆ ದಾರಿ ತಪ್ಪಿಸಲು ಯತ್ನ ನಡೆಯುತ್ತಿದೆ. ಅಕ್ರಮ ಪತ್ತೆ ಹಚ್ಚಿದ್ದಕ್ಕೆ ಖಡಕ್ ಅಧಿಕಾರಿ ದ್ವಿತೀಯಾ ಇ.ಸಿ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಕುಟುಂಬ ಮತ್ತು ಆಪ್ತರ ಬಳಿ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಗಣಿ ಇಲಾಖೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ವಿರೋಧ ಪಕ್ಷದವರು ಈ ಬೃಹತ್ ಗಣಿ ಅಕ್ರಮದ ಬಗ್ಗೆ ಗಟ್ಟಿಯಾದ ಹೋರಾಟ ಮಾಡಬೇಕು. ಲೂಟಿ ಮಾಸ್ಟರ್ ಮೈಂಡ್ ಚಂದ್ರು ಅರೆಸ್ಟ್ ಮಾಡಿ, ರೈಲ್ವೇ ಇಲಾಖೆ FIR ಮಾಡಬೇಕು. ಗಣಿ ಲೂಟಿ ಬಗ್ಗೆ CBI ತನಿಖೆ ಮಾಡಿ, ಸಾವಿರ ಕೋಟಿಯನ್ನು ವಸೂಲಿ ಮಾಡಲೇಬೇಕು. ಸರ್ಕಾರದಲ್ಲಿ ನಡೆಯುತ್ತಿರುವ ಒಂದೊಂದೇ ಹಗರಣ ಸೈಲೆಂಟ್ ಆಗಿ ಹೊರ ಬರ್ತಿವೆ.



ಇದನ್ನೂ ಓದಿ : 7ನೇ ತರಗತಿ ಬಾಲಕನ ಮೇಲೆ ಹಲ್ಲೆ – ಬೆಂಗಳೂರಿನ ನಾರಾಯಣ ಇ-ಸ್ಕೂಲ್ ಪಿಟಿ ಶಿಕ್ಷಕನ ವಿರುದ್ಧ FIR!







