ಬೆಂಗಳೂರು : ವಿಕ್ರಾಂತ್ ರೋಣ, ಡೆಡ್ಲಿ ಸೋಮ ಸಿನಿಮಾ ನಿರ್ಮಾಣ ಮಾಡಿದ್ದ ಖ್ಯಾತ ನಿರ್ಮಾಪಕ ಜಾಕ್ ಮಂಜು ಸೇರಿ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮಂಜುನಾಥ್ ಅಲಿಯಾಸ್ ಜಾಕ್ ಮಂಜು, ಬಿ.ಎಸ್. ಸಿದ್ದೇಶ್ವರ ಹಾಗೂ ಶಾಲಿನಿ ಆರ್ಟ್ಸ್ ಮೇಲ್ವಿಚಾರಕ ಮುರಳಿ ಅವರ ಮೇಲೆ ವಂಚನೆ ಆರೋಪ ಕೇಳಿಬಂದಿದ್ದು, ‘ಮಾಯನಗರಿ’ ಸಿನಿಮಾ ಬಿಡುಗಡೆಗೆ ನಿರ್ಮಾಪಕ ಎನ್.ಶಿವಶಂಕರ್ ಎಂಬುವರಿಗೆ ವಂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಿವಶಂಕರ್ ನೀಡಿದ ದೂರಿನ ಮೇರೆಗೆ ಮೂವರ ವಿರುದ್ದ ಎಫ್ಐಆರ್ ದಾಖಲಾಗಿದೆ.
ಏನಿದು ಆರೋಪ ಪ್ರಕರಣ? ‘ಮಾಯಾನಗರಿ’ ಸಿನಿಮಾ ನಿರ್ಮಾಪಕ ಶಿವಶಂಕರ್ ಅಲಿಯಾಸ್ ಶಶಾಂಕ್ ಆರಾಧ್ಯ ಅವರು ಜಾಕ್ ಮಂಜು ಹಾಗೂ ಸ್ಯಾಂಡಲ್ವುಡ್ ಪಿಕ್ಚರ್ಸ್ನ ಶಿವಕುಮಾರ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ನಟ ಅನೀಶ್ ನಟಿಸಿದ್ದ ಮಾಯಾನಗರಿ ಚಿತ್ರ ಸಂಬಂಧ ದೂರು ದಾಖಲಾಗಿದೆ.
ಮಾಯಾನಗರಿ ಚಿತ್ರಕ್ಕೆ ಸಿದ್ದೇಶ್ ಎಂಬಾತನನ್ನ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ನೇಮಕ ಮಾಡಲಾಗಿತ್ತು. ಚಿತ್ರಕ್ಕೆ ಸಿದ್ದೇಶ್ ಕೂಡ 8 ಲಕ್ಷದವರೆಗೂ ಬಂಡವಾಳ ಹಾಕಿದ್ದರು. ಆ ನಂತರದ ಚಿತ್ರೀಕರಣಕ್ಕೆ ಹಣ ಒದಗಿಸಿಕೊಡು ಎಂದು ದೂರುದಾರ ಶಶಾಂಕ್ ಸಿದ್ದೇಶ್ಗೆ ಕೇಳಿಕೊಂಡಿದ್ದರಂತೆ. ಹೀಗಾಗಿ ಸಿದ್ದೇಶ್, ಮುರಳಿ ಅನ್ನೋರ ಮೂಲಕ ಶಾಲಿನಿ ಆರ್ಟ್ ಮಾಲೀಕ ಜಾಕ್ ಮಂಜು ಅವರನ್ನು ಪರಿಚಯ ಮಾಡಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಅಗ್ರಿಮೆಂಟ್ ನಡೆದಿತ್ತು ಅನ್ನೋದು ಶಶಾಂಕ್ ಅವರ ಆರೋಪ. ಎರಡು ಬ್ಲ್ಯಾಂಕ್ ಚೆಕ್ಗೆ ಸೈನ್ ಮಾಡಿ ನಂತರ ಖಾಲಿ ಲೆಟರ್ ಹೆಡ್ನಲ್ಲಿ ಸಹಿ ಮಾಡಿಸಿಕೊಂಡಿದ್ದರು. ಮೂರ್ನಾಲ್ಕು ದಿನಗಳ ಬಳಿಕ ಹಣ ಕೊಡೋದಾಗಿ ಹೇಳಿ ಹಣ ಕೊಡದೆ ವಂಚನೆ ಮಾಡಿದ್ದಾರೆ ಎಂದು ಶಶಾಂಕ್ ಆರೋಪಿಸಿದ್ದಾರೆ.
ಹಣ ಕೊಡದೇ ಚಿತ್ರ ಮಾರಾಟದ ಅಗ್ರಿಮೆಂಟ್ಗೆ ಸಹಿ ಹಾಕಲು ಒತ್ತಾಯ ಮಾಡಿದ್ದಾರೆ. ಸಹಿ ಮಾಡದಿದ್ರೆ ಸಿನಿಮಾ ಬಿಡುಗಡೆಗೆ ತೊಂದರೆ ಮಾಡುತ್ತೇವೆ ಎಂದು ಬೆದರಿಕೆ ಕೂಡ ಹಾಕಿದ್ದಾರಂತೆ. ಅಲ್ಲದೇ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಹೀಗಾಗಿ ದಾಖಲಾತಿಗಳನ್ನ ಮಿಸ್ ಯೂಸ್ ಮಾಡಿ ವಂಚನೆ ಮಾಡಿದ್ದಾರೆ ಎಂದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಯುವಕರಿಂದ ವ್ಹೀಲಿಂಗ್ ಹುಚ್ಚಾಟ – ಫ್ಲೈಓವರ್ನಿಂದ ಬೈಕ್ಗಳನ್ನ ಕೆಳಗೆಸೆದು ಸಾರ್ವಜನಿಕರ ಆಕ್ರೋಶ..!