ವಿಜಯನಗರ : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಇಂದಿಗೆ ಐದು ದಿನಗಳು ಕಳೆದು ಹೋಗಿವೆ. ಹೀಗಾಗಿ ಅಧಿಕಾರಿಗಳಿಂದ ತಾತ್ಕಾಲಿಕ ಗೇಟ್ ಕೂರಿಸುವ ಕಾರ್ಯ ಭರದಿಂದ ಸಾಗಿದೆ. ಇಂದು ಸಂಜೆ ವೇಳೆಗೆ ಗೇಟ್ ಕೂರಿಸುವ ಕಾರ್ಯ ಬಹುತೇಕ ಮುಕ್ತಾಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಿನ್ನೆ ತುಂಗಭದ್ರಾ ಜಲಾಶಯ ಸ್ಟಾಪ್‌ಲಾಗ್ ಗೇಟ್ ಅಳವಡಿಸುವ ಜಾಗಕ್ಕೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಭೇಟಿ ನೀಡಿ ಕೆಲಸಗಾರರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ. ಧೈರ್ಯ ಕಳೆದುಕೊಳ್ಳದೇ ಕೆಲಸ ಮಾಡಿ. ಗೇಟ್ ಕೂಡಿಸಿ ಕಾರ್ಯ ಯಶಸ್ವಿ ಮಾಡಿ. ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ ರೂ. ಕೊಡುತ್ತೇನೆ. ಧೈರ್ಯವಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ. ತಾಂತ್ರಿಕ ತೊಡಕಿನಿಂದಾಗಿ ಮೊದಲ ದಿನದ ಸ್ಟಾಪ್ ಗೇಟ್ ಅಳವಡಿಕೆ ವಿಳಂಭವಾದ ಹಿನ್ನೆಲೆ ಸಚಿವ ಜಮೀರ್ ಅಹ್ಮದ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಡ್ಯಾಮ್ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೀತಿದ್ದು, ನೂರಾರು ಸಿಬ್ಬಂದಿ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸುತ್ತಿದ್ದಾರೆ. ಇಂದು ಮುಳುಗು ತಜ್ಞರ ಸಹಾಯದಿಂದ ಗೇಟ್ ಅಳವಡಿಕೆಗೆ ಪ್ರಯತ್ನ ಮಾಡಲಾಗುತ್ತದೆ.
ಇದನ್ನೂ ಓದಿ : ಇಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದ ಸಿಎಂ ಸಿದ್ದರಾಮಯ್ಯ..!