ಬೆಂಗಳೂರು : ಅಶೋಕ್ ನಗರ ಪೊಲೀಸ್ ಠಾಣೆ PSI ಮನೆಯಲ್ಲಿದ್ದ 10 ಲಕ್ಷ ಹಣ ದರೋಡೆ ಬಗ್ಗೆ ಅವರ ಹೆಂಡತಿ ಕೋರಮಂಗಲ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಕಳೆದ 15 ದಿನಗಳ ಹಿಂದೆ ದಾಖಲಾಗಿದ್ದ ಈ ಕೇಸ್ ತಡವಾಗಿ ಬೆಳಕಿಗೆ ಬಂದಿದ್ದು, ಯಾರೋ ಅಪರಿಚಿತರು ಮನೆಗೆ ನುಗ್ಗಿ ಕೈಕಾಲು ಕಟ್ಟಿ 10 ಲಕ್ಷ ದರೋಡೆ ಮಾಡಿರೋದಾಗಿ ದೂರು ನೀಡಿದ್ದರು. PSI ಪತ್ನಿ ದೂರಿನ ಮೇರೆಗೆ ದರೋಡೆ ಕೇಸ್ ದಾಖಲಾಗಿತ್ತು.
ಆದ್ರೆ, ಕೇಸ್ ದಾಖಲಾದ ನಂತ್ರ ಎಲ್ಲಾ ಪೊಲೀಸರು ಇನ್ನೂ ಸುಮ್ಮನಿದ್ದಾರೆ. ಹಾಗಾದರೆ, ನಿಜಕ್ಕೂ 10 ಲಕ್ಷ ದರೋಡೆಯಾಯ್ತ? ಯಾರದ್ದು ಆ ಹಣ? ಕೇಸ್ ತನಿಖೆ ನಡೆಯುತ್ತಿದ್ಯಾ? ಅನ್ನೋದೆಲ್ಲಾ ಇನ್ನೂ ನಿಗೂಢವಾಗಿದೆ. ಕೇಸ್ ದಾಖಲಾದ ಮೇಲೆ ಕೋರಮಂಗಲ ಪೊಲೀಸರು ಯಾವುದೇ ಮಾಹಿತಿ ನೀಡಲಿಲ್ಲ. ಇನ್ಸ್ಪೆಕ್ಟರ್ ನಟರಾಜ್ ಸೂಚನೆ ಮೇರೆಗೆ FIR ಬ್ಲಾಕ್ ಮಾಡಿರೋದಾಗಿ ಠಾಣೆಯಿಂದಲೇ ಮಾಹಿತಿ ಲಭ್ಯವಾಗಿದೆ. ಪೊಲೀಸರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೋರಮಂಗಲ ಪೊಲೀಸರ ವಿರುದ್ದ ಹಲವು ಅನುಮಾನಗಳ ಹುತ್ತ ಎದ್ದಿದ್ದು, ಈ ಬಗ್ಗೆ ಕೇಸ್ ದಾಖಲಾಗಿದ್ದರೂ ಹೊರಗಡೆ ಬರದಂತೆ FIR ಹಾಗೂ ಕೇಸ್ನ ಮಾಹಿತಿಯನ್ನು ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಕೇಸ್ ದಾಖಲಾದ ನಂತರ ಯಾಕೆ FIR ಬ್ಲಾಕ್ ಮಾಡಿದ್ದಾರೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಪ್ರಕರಣ ಸಂಬಂಧ ಮಾಹಿತಿ ನೀಡಲು ಸೌತ್ ಈಸ್ಟ್ ಡಿಸಿಪಿ ಸಾ.ರಾ ಫಾತೀಮಾ ಕೂಡ ಹಿಂದೇಟು ಹಾಕಿದ್ದಾರೆ. ಹಾಗಾಗಿ ಈ ಕೇಸ್ ಹಲವು ವಿವಾದಗಳಿಗೆ ಕಾರಣವಾಗಿದಷ್ಟೇ ಅಲ್ಲದೆ ಕುತೂಹಲ ಕೆರಳಿಸಿದ್ದು, ಪೊಲೀಸರೆಲ್ಲರು ಸೇರಿಕೊಂಡು ನಾಟಕ ಮಾಡಿದ್ರಾ? ಎಂಬ ಚರ್ಚೆ ಶುರುವಾಗಿದೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್ – ಐದು ತಿಂಗಳ ಬಳಿಕ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು..!