ಬೆಂಗಳೂರು : ರಾಜ್ಯಪಾಲರ ನೋಟಿಸ್ ಮತ್ತು ಮೈತ್ರಿಪಕ್ಷಗಳ ಪಾದಯಾತ್ರೆ ನಡುವೆಯೂ ಮುಡಾ ಹಗರಣದ ವಿಚಾರದಲ್ಲಿ ಸಂಪೂರ್ಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗಿದ್ದೇವೆ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ರವಾನಿಸಿದೆ. ಜತೆಗೆ ಸಂಪುಟದ ಎಲ್ಲ ಸಚಿವರು ಕೂಡ ಸಿಎಂ ಬೆಂಬಲಕ್ಕೆ ನಿಲ್ಲಬೇಕು. ಎಲ್ಲರೂ ಸೇರಿ ಕಾನೂನು ಹೋರಾಟಕ್ಕೆ ಸಜ್ಜಾಗಬೇಕು ಎಂದು ಸೂಚನೆ ನೀಡಿದೆ.
ನಿನ್ನೆ ಮುಖ್ಯಮಂತ್ರಿಯವರ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸಹಿತ ಸಂಪುಟದ ಎಲ್ಲ ಸಚಿವರು ಭಾಗವಹಿಸಿದ್ದರು. ಸಭೆಯ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, ಸಿದ್ದರಾಮಯ್ಯ ಅತ್ಯಂತ ಪ್ರಾಮಾಣಿಕ ಸಿಎಂ, ಸಿದ್ದರಾಮಯ್ಯ ಕರ್ನಾಟಕದ ದಕ್ಷ ಮುಖ್ಯಮಂತ್ರಿ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಸಿದ್ದು ಬೆನ್ನಿಗೆ ನಿಂತಿದ್ದಾರೆ.
ಸಿದ್ದರಾಮಯ್ಯ ಅವರ 40 ವರ್ಷದ ರಾಜಕೀಯ ನೋಡಿದ್ದೇವೆ. ಸಿದ್ದರಾಮಯ್ಯ ಅವರ ಮೇಲೆ ಒಂದು ಕಪ್ಪು ಚುಕ್ಕೆಯೂ ಇಲ್ಲ. ಸಿದ್ದರಾಮಯ್ಯ ಈ ನಾಡಿನ ಸಾಮಾನ್ಯ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಸಿದ್ದು ಜೀವನ, ಸಿದ್ಧಾಂತ, ಹಿನ್ನೆಲೆ ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ ಅಹಿಂದ ವರ್ಗದ ಮಹಾನ್ ನಾಯಕ. ಒಂದೇ ಒಂದು ಭ್ರಷ್ಟಾಚಾರದ ಕಳಂಕ ಸಿದ್ದರಾಮಯ್ಯ ಮೇಲಿಲ್ಲ. ಬಿಜೆಪಿ-ಜೆಡಿಎಸ್ನವರು ಸಿಎಂ ವಿರುದ್ಧ ಪಿತೂರಿ ಮಾಡ್ತಿದ್ದಾರೆ ಎಂದು ಕೆ.ಸಿ. ವೇಣುಗೋಪಾಲ್ ಗುಡುಗಿದ್ದಾರೆ.
ವಿಜಯೇಂದ್ರ ಮೇಲೆ ಎಷ್ಟು ಕೇಸ್ ಇವೆ, ಜೆಡಿಎಸ್ನವರ ಮೇಲೆ ಎಷ್ಟು ಕೇಸ್ ಇದೆ? BJP-JDSನವರಿಗೆ ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳುವ ಕಾಳಜಿ ಇದೆ. ಬಡವರ ಉದ್ದಾರಕ್ಕೆ ನಿಂತ ಸಿದ್ದು ಭವಿಷ್ಯ ಹಾಳು ಮಾಡೋ ಪಿತೂರಿ ನಡೆದಿದೆ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದು ತಪ್ಪು ಮಾಡಿಲ್ಲ. ನಾವು ಎಲ್ಲಾ ದಾಖಲೆಗಳನ್ನೂ ಪರಿಶೀಲನೆ ಮಾಡಿದ್ದೇವೆ. ಸಿದ್ದು ಶುದ್ಧ ಹಸ್ತರು ಎಂದ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ನಿಂದ ವ್ಯರ್ಥ ಪ್ರಯತ್ನ ಆಗ್ತಿದೆ. ವಿರೋಧ ಪಕ್ಷ ಬಿಜೆಪಿಗೆ ಈ ಹೋರಾಟದಲ್ಲಿ ಸೋಲಾಗುತ್ತೆ. ನಮ್ಮ ಗ್ಯಾರಂಟಿಗಳಿಂದ ಅವರಿಗೆ ಹಿನ್ನಡೆ ಆಗ್ತಾ ಇದೆ. ಅವರ ಹುಳುಕು ಮುಚ್ಚಿಕೊಳ್ಳಲು ಈ ವ್ಯರ್ಥ ಹೋರಾಟ ಮಾಡ್ತಿದ್ದಾರೆ. ಇನ್ನು, ಬಿಜೆಪಿ-ಜೆಡಿಎಸ್ ಅನ್ನು ಎಲ್ಲ ಸಚಿವರೂ ಸೇರಿ ಎದುರಿಸಬೇಕು ಎಂದು ಕೆ.ಸಿ.ವೇಣುಗೋಪಾಲ್ ಅವರು ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಮೂರನೇ ದಿನಕ್ಕೆ ಕಾಲಿಟ್ಟ ಮೈತ್ರಿ ಪಾದಯಾತ್ರೆ – ಇಂದು ರಾಮನಗರದ ಕೆಂಗಲ್ನಿಂದ ಮೈಸೂರು ಚಲೋ..!