ಬೆಂಗಳೂರು : ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿರುವುದು ನಾಯಿ ಮಾಂಸವಲ್ಲ, ಅದು ಮೇಕೆ ಮಾಂಸ. ಪ್ರಯೋಗಾಲಯದ ವರದಿಯಲ್ಲಿ ಮೇಕೆ ಮಾಂಸ ಎಂದು ಸಾಬೀತಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಇನ್ನು ನಾಯಿ ಮಾಂಸದ ಹಂಗಾಮ ಮಾಡಿದ್ದ ಪುನೀತ್ ಕೆರೆಹಳ್ಳಿಗೆ ಜೈಲೇ ಗತಿ ಎಂಬಂತಾಗಿದೆ. ನಾಯಿ ಮಾಂಸ ಎಂದು ಗದ್ದಲ ಎಬ್ಬಿಸಿದ್ದ ಪುನೀತ್ ಕೆರೆಹಳ್ಳಿ ಕುತಂತ್ರ ಇದೀಗ ಬಯಲಾಗಿದ್ದು, ನಾಯಿ ಮಾಂಸ ಅಂತಾ ಪ್ರಚಾರ ಮಾಡಿ ರೋಲ್ಕಾಲ್ಗೆ ಯತ್ನಿಸಿದ್ರಾ ಎಂಬ ಪ್ರಶ್ನೆಗಳು ಎದ್ದಿದೆ. ಈ ಮೂಲಕ ಪುನೀತ್ ಕೆರೆಹಳ್ಳಿ ಗ್ಯಾಂಗ್ ಅಬ್ದುಲ್ ರಜಾಕ್ ವಿರುದ್ಧ ಸಂಚು ಮಾಡಿತ್ತು ಎಂದು ಹೇಳಲಾಗ್ತಿದೆ. ಅಬ್ದುಲ್ ರಜಾಕ್ ಅವರು ಪುನೀತ್ ರೋಲ್ಕಾಲ್ ಬಗ್ಗೆ ಆರೋಪ ಮಾಡಿದ್ದು, ಕಾಟನ್ಪೇಟೆ ಪೊಲೀಸರು ರೋಲ್ಕಾಲ್ ಬಗ್ಗೆಯೂ ತನಿಖೆ ನಡೆಸಲಿದ್ದಾರೆ.
ಪ್ರಕರಣದ ಹಿನ್ನೆಲೆ : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಜು.26ರಂದು ಹಿಂದು ಮುಖಂಡ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಲವು ಹಿಂದು ಕಾರ್ಯಕರ್ತರು ದಾಳಿ ನಡೆಸಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮಾಂಸದ ಸ್ಯಾಂಪಲ್ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ವಿರುದ್ಧ ನಾಯಿ ಮಾಂಸ ದಂಧೆ ಆರೋಪ ಕೇಳಿಬಂದಿತ್ತು. ಪರಿಶೀಲನೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿತ್ತು.
ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಮೂಲಕ ನಾಯಿ ಮಾಂಸ ತಂದು, ನಗರದ ವಿವಿಧ ಹೋಟೆಲ್ಗಳಿಗೆ ಸರಬರಾಜು ಮಾಡಲಾಗುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಪ್ಲೈ ಆಗುತ್ತಿದ್ದು, ಕುರಿ ಮಾಂಸ ಅಂತ ಹೇಳಿ ನಾಯಿ ಮಾಂಸವನ್ನು ತರಿಸಿ ಇಲ್ಲಿನ ಹೋಟೆಲ್ಗಳಿಗೆ 700-800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದರು.
ಇದನ್ನೂ ಓದಿ : ವಾಹನ ಸವಾರರಿಗೆ ಗುಡ್ ನ್ಯೂಸ್ - ಇಂದಿನಿಂದ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್ ಮುಕ್ತ..!