ಬೆಂಗಳೂರು : ರಿಯಾಲಿಟಿ ಶೋ ‘ಬಿಗ್ ಬಾಸ್’ ಮನೆ ಇದೀಗ ಮತ್ತೊಂದು ಹೊಸ ವಿವಾದದ ಸುಳಿಗೆ ಸಿಲುಕಿದೆ. ಸ್ಪರ್ಧಿ ಅಶ್ವಿನಿ ಗೌಡ ಅವರು ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ಬಗ್ಗೆ ‘ಎಸ್ ಕ್ಯಾಟಗರಿ’ ಎಂಬ ಪದ ಬಳಸಿದ್ದಕ್ಕೆ ಕಾನೂನು ಸಂಕಷ್ಟ ಎದುರಾಗಿದೆ.

ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ ಕುರಿತು ಮಾತನಾಡುತ್ತಾ ‘ಎಸ್ ಕ್ಯಾಟಗರಿ’ ಎಂಬ ಆಕ್ಷೇಪಾರ್ಹ ಪದ ಬಳಸಿರುವುದನ್ನು ಖಂಡಿಸಿ, ವಕೀಲರೊಬ್ಬರು ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪದ ಬಳಕೆ ಜಾತಿ ನಿಂದನೆ ಅಥವಾ ವ್ಯಕ್ತಿ ನಿಂದನೆಯ ವ್ಯಾಪ್ತಿಗೆ ಬರುತ್ತದೆ ಎಂದು ದೂರಲಾಗಿದೆ. ದೂರಿನಲ್ಲಿ ಅಶ್ವಿನಿ ಗೌಡ ಮಾತ್ರವಲ್ಲದೆ, ಕಲರ್ಸ್ ಚಾನೆಲ್‌ನ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ ಹಾಗೂ ಡೈರೆಕ್ಟರ್ ಪ್ರಕಾಶ್ ಅವರ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ.

ವಕೀಲರ ದೂರಿನನ್ವಯ ಬಿಡದಿ ಪೊಲೀಸರು ಎನ್‌ಸಿಆರ್ (Non-Cognizable Report) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯ ಭಾಗವಾಗಿ ಅಶ್ವಿನಿ ಗೌಡ ಸೇರಿದಂತೆ ದೂರಿನಲ್ಲಿ ಹೆಸರಿಸಲಾದ ಎಲ್ಲಾ ಆರೋಪಿಗಳಿಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ. ಈ ನೋಟೀಸ್‌ನಲ್ಲಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಪ್ರಸ್ತುತ ಬಿಗ್ ಬಾಸ್ ಶೋ ಚಿತ್ರೀಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸ್ಪರ್ಧಿ ಅಶ್ವಿನಿ ಗೌಡ ಅವರು ಮನೆಯಿಂದ ಹೊರಬಂದು ಠಾಣೆಗೆ ಹಾಜರಾಗಲು ಸಾಧ್ಯವಿಲ್ಲ. ಹೀಗಾಗಿ, ಬಿಗ್ ಬಾಸ್ ತಂಡವು ಪೊಲೀಸರಿಗೆ ಮನವಿ ಮಾಡಿದ್ದು, ಸ್ಟುಡಿಯೋಗೆ ಆಗಮಿಸಿ ಅಲ್ಲಿಯೇ ಅಶ್ವಿನಿ ಗೌಡ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಕೋರಿದೆ. ಈ ಮನವಿಗೆ ಬಿಡದಿ ಪೊಲೀಸರು ಸಮ್ಮತಿ ಸೂಚಿಸಿದ್ದು, ಶೀಘ್ರದಲ್ಲಿಯೇ ಸ್ಟುಡಿಯೋಗೆ ತೆರಳಿ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ : ಪುನೀತ್ ನಿರ್ದೇಶನದ 2ನೇ ಚಿತ್ರ “ಜಾನ್” ಶೂಟಿಂಗ್ ಶುರು – ಚಿತ್ರದ ಟೀಸರ್ ಔಟ್!







