ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಆಗಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಅದರಂತೆ ದಿನಕ್ಕೊಂದು ವಿಚಾರಗಳು ಬೆಳಕಿಗೆ ಬರುತ್ತಲಿದೆ.
ಇದೀಗ ಈ ಬಹುಕೋಟಿ ಹಗರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಮತ್ತೊಂದು ಬೇಟೆಯಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಹಣ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎನ್ನಲಾದ ಭಾರತ ಸಂಚಾರ ನಿಗಮದ ಲಿಮಿಟೆಡ್(ಬಿಎಸ್ಎನ್ಎಲ್)ನ ಮಹಿಳಾ ಅಧಿಕಾರಿಯೊಬ್ಬರ ಪತಿಯನ್ನು ಎಸ್‌ಐಟಿ ಸೋಮವಾರ ಬಂಧಿಸಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣ ಮೂಲದ ಕಾಕಿ ಶ್ರೀನಿವಾಸ್ ರಾವ್ ಬಂಧಿತನಾಗಿದ್ದು, ಎರಡು ವರ್ಷಗಳಿಂದ ಯಶವಂತಪುರ ಬಳಿ ತನ್ನ ಕುಟುಂಬದ ಜತೆ ಆತ ನೆಲೆಸಿದ್ದ. ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡು ದೇಶ ಸಂಚಾರ ಹೋಗಿದ್ದ ಶ್ರೀನಿವಾಸ್, ನಗರಕ್ಕೆ ಮರಳಿದ ಕೂಡಲೇ ಎಸ್‌ಐಟಿ ಆತನನ್ನು ಬಂಧಿಸಿದೆ. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಆರೋಪಿಯನ್ನು 9 ದಿನ ಕಸ್ಟಡಿಗೆ ಪಡೆದಿದೆ.
ಆರೋಪಿ ಶ್ರೀನಿವಾಸ್ ವೃತ್ತಿಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿದ್ದು, ಬೆಂಗಳೂರು ವಲಯದ ಬಿಎಸ್ಎನ್ಎಲ್ನಲ್ಲಿ ಆತನ ಪತ್ನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೈದರಾಬಾದ್ ನಗರದಲ್ಲಿ ಡಿಜಿಟಲ್ ಕಂಪನಿಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿದ್ದ ಶ್ರೀನಿವಾಸ್, ಸುಲಭವಾಗಿ ಹಣ ಸಂಪಾದನೆಗೆ ಅಡ್ಡದಾರಿ ತುಳಿದಿದ್ದ.
ಹಲವು ವರ್ಷಗಳಿಂದ ಹೈದರಾಬಾದ್‌ನ ಸತ್ಯನಾರಾಯಣ್ ವರ್ಮಾನ ಜತೆ ಶ್ರೀನಿವಾಸ್ಗೆ ಸ್ನೇಹವಿತ್ತು. ಇದೇ ಗೆಳೆತನದಲ್ಲೇ ವರ್ಮಾನ ಅಕ್ರಮ ಹಣ ವರ್ಗಾವಣೆ ದಂಧೆಗೆ ಶ್ರೀನಿವಾಸ್ ಕೂಡ ಸಾಥ್ ಕೊಟ್ಟಿದ್ದ. ಬಳಿಕ ಛತ್ತೀಸ್‌ಗಢ ರಾಜ್ಯದ ಕೃಷಿ ಅಭಿವೃದ್ಧಿ ಮಂಡಳಿಯಲ್ಲಿ 14 ಕೋಟಿ ರೂ. ಹಣ ದೋಚಿದ್ದ ಪ್ರಕರಣದಲ್ಲಿ ವರ್ಮಾ ಜತೆ ಶ್ರೀನಿವಾಸ್ ಕೂಡ ಜೈಲು ಸೇರಿದ್ದ. ಕಳೆದ ಅಕ್ಟೋಬರ್‌ನಲ್ಲಿ ಛತ್ತೀಸ್‌ಗಢದ ರಾಯಪುರ ಜೈಲಿನಿಂದ ಜಾಮೀನು ಪಡೆದು ಬಿಡುಗಡೆಗೊಂಡ ನಂತರ ಬೆಂಗಳೂರಿಗೆ ಮರಳಿದ ಶ್ರೀನಿವಾಸ್, ಇದಾದ ಕೆಲವೇ ದಿನಗಳ ನಂತರ ವಾಲ್ಮೀಕಿ ನಿಗಮದ ಹಗರಣಕ್ಕೆ ಕೈ ಹಾಕಿದ್ದ ಎನ್ನಲಾಗಿದೆ.
ಇದನ್ನೂ ಓದಿ : ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – ಆಗಸ್ಟ್ 1 ರಿಂದಲೇ 7ನೇ ವೇತನ ಆಯೋಗದ ಶಿಫಾರಸು ಜಾರಿ..!