ಮಂಗಳೂರು : ಬಾಲಿವುಡ್ನ ಖ್ಯಾತ ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆ.ಎಲ್ ರಾಹುಲ್ ಹಾಗೂ ನಟ ಸುನಿಲ್ ಶೆಟ್ಟಿ ಕುಟುಂಬ ಉಳ್ಳಾಲದ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಭಾನುವಾರ ನಡೆದ ಹರಕೆಯ ಕೋಲದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದುಕೊಂಡಿದ್ದಾರೆ.
ಕತ್ರಿನಾ ಕೈಫ್, ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ, ಮ್ಯಾಟ್ರಿಕ್ಸ್ ಎಂಟರ್ಟೈನ್ಮೆಂಟ್ನ ರೇಷ್ಮಾ ಶೆಟ್ಟಿ, ಕತ್ರಿನಾ ಪತಿ ವಿಕ್ಕಿ ಕೌಶಲ್ ಹಾಗೂ ವಿ.ಎಂ. ಕಾಮತ್ ಸಹಿತ 9 ಮಂದಿಯ ಕೋಲವನ್ನು ಎರಡು ತಿಂಗಳ ಹಿಂದೆ ಬರೆಸಲಾಗಿತ್ತು. ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್ ಹೊರತುಪಡಿಸಿ ಉಳಿದೆಲ್ಲರೂ ಕೋಲದಲ್ಲಿ ಭಾಗಿಯಾಗಿಯಾಗಿದ್ದಾರೆ.
ಮಹಿಳೆಯರಿಗೆ ರಾತ್ರಿ ಹೊತ್ತು ಕೊರಗಜ್ಜನ ಕಟ್ಟೆಯ ಒಳಗೆ ಪ್ರವೇಶ ಇಲ್ಲದ ಕಾರಣ ಕತ್ರಿನಾ, ಅಥಿಯಾ ಮತ್ತು ರೇಷ್ಮಾ ದೈವಸ್ಥಾನದ ಹೊರಗಡೆಯಿಂದ ಕೋಲವನ್ನು ವೀಕ್ಷಿಸಿದ್ದಾರೆ. ಕೆಎಲ್ ರಾಹುಲ್ ಮತ್ತು ಅಹಾನ್ ಕೋಲದಲ್ಲಿ ಭಾಗಿಯಾಗಿದ್ದರು.
ಇನ್ನು, ನಟಿ ಕತ್ರಿನಾ ಕೈಫ್ ಅವರು ಮುಸ್ಲಿಂ ಆಗಿದ್ದರು ಸಹ ಅವರು ಹಿಂದೂ ವ್ಯಕ್ತಿಯನ್ನು ವರಿಸಿದ್ದಾರೆ. ಈ ಕಾರಣಕ್ಕೆ ಅವರು ಹಿಂದೂ ಹಾಗೂ ಮುಸ್ಲಿಂ ಧರ್ಮ ಎರಡನ್ನೂ ಆಚರಿಸುತ್ತಾರೆ. ಅವರಿಗೆ ಹಿಂದೂ ದೇವರ ಬಗ್ಗೆಯೂ ಭಕ್ತಿ ಹೆಚ್ಚಿದೆ.
ಸದ್ಯ ನಟಿ ಕತ್ರಿನಾ ಕೈಫ್ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಕೊರಗಜ್ಜ ದೈವದ ಕುರಿತು ಬಾಲಿವುಡ್ ಮಂದಿಗೂ ಇತ್ತೀಚಿಗೆ ವಿಶೇಷ ನಂಬಿಕೆ ಸೃಷ್ಟಿ ಆಗಿದೆ. ಇದಕ್ಕೆ ಕಾರಣ ಆಗಿರೋದು ಬಾಲಿವುಡ್ನಲ್ಲಿ ಇರುವ ಕರಾವಳಿ ಮೂಲದ ಮಂದಿ ಎಂದೇ ಹೇಳಬಹುದು. ನಟಿ ಶಿಲ್ಪಾ ಶೆಟ್ಟಿ, ನಟ ಸುನೀಲ್ ಶೆಟ್ಟಿ ಮೊದಲಾದವರು ಆಗಾಗ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ, ಬಾಲಿವುಡ್ನ ಉಳಿದವರಿಗೂ ಈ ಬಗ್ಗೆ ಈಗ ನಂಬಿಕೆ ಮೂಡಿದೆ.
ಕುತ್ತಾರುನಲ್ಲಿ ಕೊರಗಜ್ಜನ ಕೋಲ ನೀಡುವ ಮೊದಲು ಟೀಂ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಮಂಗಳೂರು ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿದ್ದಾರೆ.
ಇದನ್ನೂ ಓದಿ : ಕಾಪಿರೈಟ್ ಉಲ್ಲಂಘನೆ : ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ದ FIR ದಾಖಲು..!