ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಸರ್ಕಾರ ಆಯೋಗ ರಚಿಸಿದೆ. ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗ ರಚನೆ ಮಾಡಿದ್ದು, 6 ತಿಂಗಳೊಳಗೆ ವರದಿ ನೀಡುವಂತೆ ವಿಚಾರಣಾ ಆಯೋಗಕ್ಕೆ ಸೂಚನೆ ನೀಡಲಾಗಿದೆ.
ಈ ಮೂಲಕ ಅಧಿವೇಶನ ಆರಂಭಕ್ಕೂ ಮುನ್ನವೇ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದ್ದು, ಮುಡಾ ಕೋಲಾಹಲಕ್ಕೆ ಬ್ರೇಕ್ ಹಾಕಲು ಸಿಎಂ ಸಿದ್ದು ಪ್ಲಾನ್ ಮಾಡಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಹೊರಬರಲಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಮುಡಾ ಸೈಟ್ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪಗಳು ಕೇಳಿ ಬಂದಿದ್ದು, ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಪ್ರತಿಪಕ್ಷಗಳು ತೀವ್ರ ಹೋರಾಟ ನಡೆಸುತ್ತಿವೆ. ಇಂದಿನಿಂದ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧವಾಗಿವೆ. ಹೀಗಾಗಿ ರಾಜ್ಯ ಸರ್ಕಾರ ಮುಡಾ ಅಕ್ರಮದ ತನಿಖೆಗೆ ಆಯೋಗ ರಚಿಸಿ ಆದೇಶ ಹೊರಡಿಸಿದ್ದು, 6 ತಿಂಗಳೊಳಗೆ ವರದಿ ನೀಡುವಂತೆ ವಿಚಾರಣಾ ಆಯೋಗಕ್ಕೆ ಸೂಚಿಸಿದೆ.
ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ, ದಾಖಲೆಗಳನ್ನು ಒದಗಿಸಿ ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು, ಆರ್ಥಿಕ ಸಲಹೆಗಾರರು, ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಹಕರಿಸುವಂತೆ ಸೂಚಿಸಿದೆ.
ಈ ಮೂಲಕ ವಿರೋಧ ಪಕ್ಷಗಳ ಪ್ಲಾನ್ ಉಲ್ಟಾ ಮಾಡಲು ಸಿಎಂ ಸಿದ್ದು ಮಹತ್ವದ ಹೆಜ್ಜೆ ಇಟ್ಟಿದ್ದು, ನ್ಯಾಯಾಂಗ ತನಿಖೆ ನಡೆದ್ರೆ ಬಿಜೆಪಿ, ಜೆಡಿಎಸ್ಗೂ ಸಂಕಷ್ಟ ಎದುರಾಗುತ್ತಾ? ಬಿಜೆಪಿ, ಜೆಡಿಎಸ್ ನಾಯಕರ ಸೈಟ್ ಬಂಡವಾಳವೂ ತನಿಖೆಯಲ್ಲಿ ಬಯಲಾಗುತ್ತಾ ಎಂಬ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ : ಇಂದಿನಿಂದ ವಿಧಾನ ಮಂಡಲ ಅಧಿವೇಶನ – ಮೊದಲ ದಿನವೇ ರಣಾಂಗಣವಾಗುತ್ತಾ ಸದನ?