ಮುಂಬೈ : ಸುಮಾರು 17 ವರ್ಷಗಳ ತಪ್ಪಸ್ಸಿನ ಬಳಿಕ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ತವರಿಗೆ ವಾಪಸ್ ಆಗಿದೆ. ಭಾರತಕ್ಕೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗಣ್ಯರು ಸೇರಿದಂತೆ ಹಲವರು ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ನಿನ್ನೆ ಮುಂಬೈನ ವಾಂಖೆಡೆಯಲ್ಲಿ ಟಿ20 ವಿಶ್ವಕಪ್ ವಿಜಯೋತ್ಸವದ ಮೆರವಣಿಗೆ ಆಯೋಜನೆ ಮಾಡಲಾಗಿತ್ತು. ಸಂಜೆ 6 ಗಂಟೆಯಿಂದಲೇ ಮರೈನ್ ಡ್ರೈವ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ಟೀಮ್ ಇಂಡಿಯಾ ವಿಕ್ಟರಿ ಪರೇಡ್ ನಡೆಸಿತು. ಟಿ20 ವಿಶ್ವಕಪ್ ಗೆದ್ದು ತಾಯ್ನಾಡಿಗೆ ಬಂದಿರುವ ಭಾರತ ತಂಡಕ್ಕೆ ಅಭಿಮಾನಿಗಳಿಂದ ಅಭೂತಪೂರ್ವ ಸ್ವಾಗತ ದೊರೆತಿದೆ.
ದೆಹಲಿಯಿಂದ ಮುಂಬೈಗೆ ಆಗಮಿಸಿದ್ದ ಭಾರತ ತಂಡ ನಿನ್ನೆ ಸಂಜೆ ತೆರೆದ ಬಸ್ನಲ್ಲಿ ವಿಜಯಯಾತ್ರೆಯನ್ನು ನಡೆಸಿತು. ನಾರಿಮನ್ ಪಾಯಿಂಟ್ನಿಂದ ಶುರುವಾಗುವ ವಿಜಯೋತ್ಸವ ಮೆರವಣಿಗೆ ಪ್ರಸಿದ್ಧ ಮರೈನ್ ಡ್ರೈವ್ ಬೀಚ್ ಮೂಲಕ ವಾಂಖೇಡೆ ಸ್ಟೇಡಿಯಂಗೆ ತಲುಪಿತು.
ಈ ವೇಳೆ ಸಮುದ್ರದ ಕಿನಾರೆ ಮರೈನ್ ಡ್ರೈವ್ ಬೀಚ್ನ ರಸ್ತೆಯ ಎರಡೂ ಬದಿಯಲ್ಲಿ ಲಕ್ಷಾಂತರ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಮರೈನ್ ಡ್ರೈವ್ ರಸ್ತೆ ಸಮುದ್ರವನ್ನೂ ಮೀರಿಸಿ ಅಭಿಮಾನಿಗಳ ಸಾಗರದಂತೆ ಬದಲಾಗಿತ್ತು. ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಅಭಿಮಾನಿಗಳು ಧನ್ಯರಾಗಿದ್ದಾರೆ.
ಸಮುದ್ರವನ್ನೂ ನಾಚಿಸುವಂತೆ ನೆರೆದಿದ್ದ ಅಭಿಮಾನಿಗಳ ಸಾಗರ ಕಂಡು ಆಟಗಾರರು ಹರ್ಷಗೊಂಡಿದ್ದಾರೆ. ಮೈಮೇಲೆ ರಾಷ್ಟ್ರಧ್ವಜ ಹೊದ್ದು, ಕೈಯಲ್ಲಿ ವಿಶ್ವಕಪ್ ಟ್ರೋಫಿ ಹಿಡಿದು ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಾ ಕೈಬೀಸಿ ಮುಂದೆ ಸಾಗಿದ್ದಾರೆ.
ವಿಜಯಯಾತ್ರೆಯಲ್ಲಿ ʻರೋಹಿತ್ ಭಾಯ್, ಕೊಹ್ಲಿ ಭಾಯ್ʼ ಘೋಷಣೆಗಳು ಮೊಳಗಿವೆ. ಬೆಳಗ್ಗೆಯಿಂದಲೇ ಕಾದು ನಿಂತಿದ್ದ ಅಭಿಮಾನಿಗಳು ಮಳೆಯಲ್ಲೂ ಉತ್ಸಾಹ ಕಳೆದಕೊಳ್ಳದೇ ವಿಶ್ವವೀರರನ್ನ ಸ್ವಾಗತಿಸಿದ್ದಾರೆ. ಸುಮಾರು 2 ಕಿಮೀ ವಿಜಯಯಾತ್ರೆ ನಡೆದಿದೆ.
ಇನ್ನು ವಿಶ್ವಕಪ್ ಗೆದ್ದ ದಿನವೇ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಘೋಷಿಸಿತ್ತು. ಈ ಬಹುಮಾನದ ಮೊತ್ತವನ್ನು ಆಟಗಾರರಿಗೆ ಬಿಸಿಸಿಐ ನಿನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿತರಣೆ ಮಾಡಿದೆ.
ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮದ ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಜಮಾಯಿಸಿದ್ದ ಲಕ್ಷಾಂತರ ಅಭಿಮಾನಿಗಳತ್ತ ಭಾರತ ತಂಡದ ಆಟಗಾರರು ಟಿ20 ವಿಶ್ವಕಪ್ ಟ್ರೋಫಿಯನ್ನು ಪ್ರದರ್ಶಿಸಿ ಸಂಭ್ರಮಿಸಿದ್ದಾರೆ. ಸಂತಸದಿಂದ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ : ವಿಶ್ವ ವಿಜೇತರ ಮಹಾ ರೋಡ್ ಶೋ – ವಾಂಖೆಡೆಗೆ ಹರಿದು ಬಂದ ಜನಸಾಗರ..!