ನವದೆಹಲಿ : ವಿಶ್ವಕಪ್ ಟ್ರೋಫಿಯೊಂದಿಗೆ ತವರಿಗೆ ಮರಳಿದ ಟೀಮ್ ಇಂಡಿಯಾ ಇದೀಗ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದೆ. ನಮೋ ನಿವಾಸಕ್ಕೆ ಭೇಟಿ ನೀಡಿದ ರೋಹಿತ್ ಪಡೆ ಪ್ರಧಾನಿ ಮೋದಿಗೆ ವಿಶ್ವಕಪ್ ನೀಡಿ ಸಂಭ್ರಮಿಸಿದ್ರು. ಬಳಿಕ ಆಟಗಾರರು ಪ್ರಧಾನಿ ಜೊತೆ ಕುಳಿತು ವಿಶ್ವಕಪ್ ಗೆಲುವಿನ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಮಣಿಸಿ T-20 ವಿಶ್ವಕಪ್ ಗೆದ್ದಿದ್ದ ಟೀಂ ಇಂಡಿಯಾ 3 ದಿನಗಳ ನಂತರ ತವರಿಗೆ ಮರಳಿದೆ. ಇದೀಗ ತಾಯ್ನಾಡಿಗೆ ಬಂದಿಳಿದಿರುವ ವಿಶ್ವಗೆದ್ದ ವೀರರನ್ನು ಪ್ರಧಾನಿ ಮೋದಿ ದೆಹಲಿಯ ತಮ್ಮ ನಿವಾಸಕ್ಕೆ ಕರೆಸಿ ಅಭಿನಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ BCCI ಕಾರ್ಯದರ್ಶಿ ಜೈ ಶಾ, ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಟೀಂ ತೆರಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯ ಸ್ವೀಕರಿಸಿದ ಬಳಿಕ, ಆಟಗಾರರು ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಲಿದ್ದಾರೆ. ಅಲ್ಲಿ ತೆರೆದ ವಾಹನದಲ್ಲಿ ಆಟಗಾರರನ್ನು ಮೆರವಣಿಗೆ ನಡೆಸಿ ಬಳಿಕ ಅದ್ಧೂರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ವಿಜಯಯಾತ್ರೆಗೆ ಸಕಲ ಸಿದ್ಧತೆ : ವಿಶ್ವಕಪ್ ಗೆದ್ದ ಟೀಂ ಇಂಡಿಯಾ ತಂಡದ ಆಟಗಾರರಿಗೆ ಮುಂಬೈನಲ್ಲಿ ಇಂದು ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 5 ಗಂಟೆಗೆ ಭಾರತ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಇದಕ್ಕೂ ಮೊದಲು ಅಂದರೆ, ಸಂಜೆ 4 ಗಂಟೆಗೆ ಮರೀನ್‌ನಿಂದ ವಾಂಖೆಡೆ ಸ್ಟೇಡಿಯಂವರೆಗೆ ತೆರೆದ ವಾಹನದಲ್ಲಿ ಟ್ರೋಫಿಯೊಂದಿಗೆ ಮೆರವಣಿಗೆ ಬರಲಿದ್ದಾರೆ. ವಿಕ್ಟರಿ ಪರೇಡ್‌ನಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲರೂ ಬನ್ನಿ ಎಂಬುದಾಗಿ ರೋಹಿತ್ ಶರ್ಮಾ ಅವರು ಈಗಾಗಲೇ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ : ಅರುಣ್ ಕಟಾರೆಯಿಂದ ಸ್ಯಾಂಡಲ್ವುಡ್ನ ಟೆಕ್ನಿಷನ್ಗೆ ಸಂಕಷ್ಟ- ಡಮ್ಮಿ ಗನ್ ಕೊಟ್ಟಿದ್ದ ಸಾಹಿಲ್ಗೆ ನೋಟಿಸ್ ಜಾರಿ..!