ಟಿ20 ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಬೀಗಿದ್ದು, ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲಾಸ್ಟ್ ಬಾಲ್ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 7 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 17 ವರ್ಷಗಳ ಬಳಿಕ ಎರಡನೇ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡು, ಸತತ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿದೆ.
2007ರ ಟಿ 20 ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ಭಾರತವನ್ನು ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಮಾಡಿದರು. ಇದೀಗ ಮತ್ತೊಮ್ಮೆ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ 2024ರ ಟಿ20 ವಿಶ್ವಕಪ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇನ್ನೊಂದೆಡೆ ರಾಹುಲ್ ದ್ರಾವಿಡ್ 2024ರ ಟಿ 20 ವಿಶ್ವಕಪ್ ಮುಕ್ತಾಯದ ಬಳಿಕ ಭಾರತ ತಂಡದ ಹೆಡ್ ಕೋಚ್ ಆಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ಗುರುಗಳಿಗೆ ರೋಹಿತ್ ಶರ್ಮಾ ಪಡೆ ಟಿ20 ವಿಶ್ವಕಪ್ ಗೆಲುವಿನ ಉಡುಗೊರೆ ನೀಡಿದ್ದಾರೆ.
ಟಿ20 ವಿಶ್ವಕಪ್ 2024 ಗೆದ್ದ ಬಳಿಕ ಮಾತನಾಡಿದ ದ್ರಾವಿಡ್ ಅವರು, “ಒಬ್ಬ ಆಟಗಾರನಾಗಿ, ನಾನು ಟ್ರೋಫಿ ಗೆಲ್ಲುವ ಅದೃಷ್ಟವನ್ನು ಹೊಂದಿರಲಿಲ್ಲ ಆದರೆ ನಾನು ನನ್ನ ಅತ್ಯುತ್ತಮವಾದುದನ್ನು ನೀಡಿದ್ದೆ. ಕೋಚ್ ಆಗಿ, ತಂಡ ಈ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗುವಂತೆ ಮಾಡಿದ್ದು ನನ್ನ ಅದೃಷ್ಟ ಇದು ಉತ್ತಮ ಪ್ರಯಾಣವಾಗಿದೆ … ” ಎಂದಿದ್ದಾರೆ.
“ಇದು 2 ವರ್ಷಗಳ ಪ್ರಯಾಣ, ಕೇವಲ ಈ ಟಿ20 ವಿಶ್ವಕಪ್ ನದ್ದು ಅಲ್ಲ. ಈ ತಂಡದ ನಿರ್ಮಾಣ, ಬಯಸಿದ್ದ ಕೌಶಲ್ಯಗಳು, ನಾವು ಬಯಸಿದ ಆಟಗಾರರು… ಇವೆಲ್ಲಾ ನಾನು 2021 ರಲ್ಲಿ ಹುದ್ದೆಗೆ ಬಂದಾಗ ಪ್ರಾರಂಭವಾದ ಚರ್ಚೆಗಳು. ಕೇವಲ ಈ ವಿಶ್ವಕಪ್ ನ ಸಿದ್ದತೆಯಲ್ಲ. ಇದು 2 ವರ್ಷಗಳ ಪ್ರಯಾಣದಂತೆ ಭಾಸವಾಗುತ್ತಿದೆ. ಎರಡು ವರ್ಷದಿಂದ ಏನೆಲ್ಲಾ ಮಾಡಿದ್ದೆವು ಅದೆಲ್ಲಾ ಈಗ ಬಾರ್ಬಡೋಸ್ ನಲ್ಲಿ ಬಂದು ಸಮ್ಮಿಳಿತವಾಗಿದೆ ಅಷ್ಟೇ” ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಶುಭಕೋರಿದ ಪ್ರಧಾನಿ ಮೋದಿ..!