ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ನಿಂತು ಗೆಲುವು ಸಾಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ರಾಯ್ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧಾರ ಮಾಡಿದ್ದು, ವಯನಾಡ್ನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯಲು ಪ್ರಿಯಾಂಕಾ ಗಾಂಧಿ ಸಜ್ಜಾಗಿದ್ದು, ಸಹೋದರನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಈ ಮೂಲಕ ಅವರು ಕೊನೆಗೂ ಚುನಾವಣಾ ರಾಜಕಾರಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಸೋಮವಾರ (ಜೂ.17) ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ.ಸಿ ವೇಣುಗೋಪಾಲ್ ಅವರ ಸಮ್ಮುಖದಲ್ಲಿ ನಡೆದ ಉನ್ನತ ಮಟ್ಟದ ಸಭೆ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿ ನಿರ್ಧಾರದ ಬಗ್ಗೆ ಘೋಷಣೆ ಮಾಡಿದ್ದಾರೆ. ಅವರು ವಯನಾಡ್ ಕ್ಷೇತ್ರವನ್ನು ಬಿಟ್ಟು ರಾಯ್ಬರೇಲಿ ಕ್ಷೇತ್ರವನ್ನು ಉಳಿಸಿಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಿಂದಲೂ ಭರ್ಜರಿ ವಿಜಯ ಸಾಧಿಸಿದ್ದರು. ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರದಲ್ಲಿ 6,87,649 ಮತಗಳನ್ನು ಪಡೆಯುವ ಮೂಲಕ 3,90,030 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರೆ, ವಯನಾಡ್ ಕ್ಷೇತ್ರದಲ್ಲಿ 6,47,445 ಮತಗಳನ್ನು ಪಡೆದು ಗೆಲುವು ಸಾಧಿಸಿರುವ ರಾಹುಲ್ 3,64,422 ಮತಗಳ ಅಂತರದಿಂದ ಗೆದ್ದು ಬೀಗಿದ್ದರು.
ಇದನ್ನೂ ಓದಿ : ಮಲಯಾಳಂ ನಟಿ ಹನಿ ರೋಸ್ ನಟನೆಯ ‘ರೆಚೆಲ್’ ಸಿನಿಮಾದ ಟೀಸರ್ ರಿಲೀಸ್..!