Download Our App

Follow us

Home » ಸಿನಿಮಾ » ಕನ್ನಡ ಸ್ಟಾರ್ ನಟರಿಗೆ ಏನಾಗಿದೆ? ಇವರ ಸಿನಿಮಾ ತೆರೆಕಂಡು ಇಷ್ಟೊಂದು ತಿಂಗಳಾಯ್ತ?

ಕನ್ನಡ ಸ್ಟಾರ್ ನಟರಿಗೆ ಏನಾಗಿದೆ? ಇವರ ಸಿನಿಮಾ ತೆರೆಕಂಡು ಇಷ್ಟೊಂದು ತಿಂಗಳಾಯ್ತ?

ಸ್ಯಾಂಡಲ್​​ವುಡ್​ನಲ್ಲಿ ಕಳೆದ ನಾಲ್ಕು ತಿಂಗಳಿಂದ ದಾಖಲೆ ಪ್ರಮಾಣದಲ್ಲಿ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಅದರಲ್ಲಿ ಎಷ್ಟು ಸಿನಿಮಾಗಳು ಗೆದ್ದಿವೆ, ಎಷ್ಟು ಸಿನಿಮಾಗಳು ಸೋತಿವೆ ಎಂಬುದನ್ನು ಹೇಳುವುದು ಅಸಾಧ್ಯ. 130 ದಿನಗಳಲ್ಲಿ 90ಕ್ಕೂ ಅಧಿಕ ಕನ್ನಡ ಸಿನಿಮಾಗಳು ತೆರೆಕಂಡಿವೆಯಾದರೂ, ಥಿಯೇಟರ್‌ನಲ್ಲಿ ಗಟ್ಟಿಯಾಗಿ ಯಾವ ಸಿನಿಮಾಗಳು ನೆಲೆ ನಿಲ್ಲುವ ಶಕ್ತಿ ಹೊಂದಿರಲಿಲ್ಲ. ಸಿನಿಮಾವನ್ನು ನೋಡಲು ಪ್ರೇಕ್ಷಕ ಮುಗಿಬಿದ್ದು ಬರಲೇ ಇಲ್ಲ.

ಅಷ್ಟಕ್ಕೂ ಚಿತ್ರಮಂದಿರಕ್ಕೆ ಜನರು ಬರಬೇಕೆಂದರೆ ಏನು ಮಾಡಬೇಕು? ಸ್ಟಾರ್ ನಟರ ಸಿನಿಮಾಗಳು ಸಾಲಾಗಿ ಬರಬೇಕು ಅಂತಾರೆ ಚಿತ್ರರಂಗ ಬಲ್ಲವರು. ಯಾಕೆಂದರೆ, ಹೊಸಬರ ಸಿನಿಮಾಗಳಿಗೆ ಮೊದಲ ದಿನವೇ ಥಿಯೇಟರ್ ತುಂಬಿಸುವ ಶಕ್ತಿ ಇರುವುದಿಲ್ಲ. ಆದರೆ ಜನಪ್ರಿಯ ನಟರ ಸಿನಿಮಾಗಳು ಹಾಗಲ್ಲ. ವಾರದ ಮೊದಲೇ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿ, ಕನಿಷ್ಟ 4-5 ದಿನವಾದರೂ ಹೌಸ್‌ ಫುಲ್ ಪ್ರದರ್ಶನ ಆಗುವಂತೆ ಮಾಡುತ್ತಾರೆ. ಅದಕ್ಕಾಗಿ ಸ್ಟಾರ್ ಸಿನಿಮಾಗಳು ಅವಶ್ಯಕತೆ ಬಹಳ ಇದೆ ಎಂಬುದು ಚಿತ್ರಮಂದಿರಗಳ ಮಾಲೀಕರ ಮಾತು. ಹಾಗಾದರೆ, ಕನ್ನಡದ ‘ಸ್ಟಾರ್’ ಹೀರೋಗಳು ತೆರೆ ಮೇಲೆ ಕಾಣಿಸಿಕೊಂಡು ಎಷ್ಟು ತಿಂಗಳಾಯ್ತು ಗೊತ್ತಾ?

ಕನ್ನಡದ ಬಾದ್​ಷಾ ಕಿಚ್ಚ ಸುದೀಪ್ ಅವರ ಸಿನಿಮಾ ತೆರೆಗೆ ಬರುತ್ತಿದೆ ಎಂದಾಗ, ಅದರ ಕ್ರೇಜೇ ಬೇರೆ ಲೆವಲ್ ಅಲ್ಲೇ ಇರುತ್ತಿತ್ತು. ಫ್ಯಾನ್ಸ್ ಮುಗಿಬಿದ್ದು ಥಿಯೇಟರ್‌ನತ್ತ ಹೆಜ್ಜೆ ಹಾಕುತ್ತಿದ್ದರು.  ಸುದೀಪ್ ಅವರು ಹೀರೋ ಆಗಿ ಕಾಣಿಸಿಕೊಂಡ ವಿಕ್ರಾಂತ್ ರೋಣ ತೆರೆಕಂಡು 21 ತಿಂಗಳಾಗಿದೆ. 2022ರ ಜುಲೈನಲ್ಲಿ ಆ ಸಿನಿಮಾ ತೆರೆಗೆ ಬಂದಿತ್ತು. ಆದದಾ ಮೇಲೆ ಅವರು ಹೀರೋ ಆಗಿರುವ ಮ್ಯಾಕ್ಸ್ ಸಿನಿಮಾ ಶುರುವಾಗಿದೆ. ಆದರೆ ಆ ಚಿತ್ರ ಯಾವಾಗ ಬರಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ. ಇದರ ಜೊತೆಗೆ ಸುದೀಪ್ ಅವರ ಇನ್ನೂ ಮೂರ್ನಾಲ್ಕು ಸಿನಿಮಾಗಳು ಘೋಷಣೆ ಆಗಿವೆ.

ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ 2 ಸಿನಿಮಾ ಮಾಡಿದ ಮೇಲೆ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ. ಕೆಜಿಎಫ್ 2 ತೆರೆಕಂಡು 25 ತಿಂಗಳಾಗಿದೆ. ಆದರೆ ಈವರೆಗೂ ಯಶ್ ಅವರ ಇನ್ನೊಂದು ಸಿನಿಮಾ ರಿಲೀಸ್ ಆಗಿಲ್ಲ. ಸದ್ಯ ಘೋಷಣೆ ಆಗಿರುವ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಕೆಲಸಗಳು ಈಚೆಗಷ್ಟೇ ಆರಂಭವಾಗಿವೆ. ಆ ಸಿನಿಮಾ ತೆರೆಗೆ ಬರುವುದು 2025ರಲ್ಲಿ. ಅಲ್ಲಿಗೆ 2023ರಲ್ಲಿ ಅಭಿಮಾನಿಗಳಿಗೆ ಚಿತ್ರಮಂದಿರಗಳಲ್ಲಿ ದರ್ಶನ ನೀಡದ ಯಶ್, 2024ರಲ್ಲಿಯೂ ಥಿಯೇಟರ್‌ನತ್ತ ಬರುವುದಿಲ್ಲ ಎಂಬುದು ಖಚಿತ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಫ್ಯಾನ್ಸ್ ಅಂತು ಅತ್ಯಂತ ಹೆಚ್ಚು ಕುತೂಹಲದಿಂದ ಅವರ ಸಿನಿಮಾಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಹೌದು, ಧ್ರುವ ಸರ್ಜಾ ಕಡೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು ಪೊಗರು ಸಿನಿಮಾದಲ್ಲಿ. ಆ ಸಿನಿಮಾವು 2021ರ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ಅಲ್ಲಿಗೆ ಧ್ರುವ ಸರ್ಜಾ ತೆರೆಮೇಲೆ ಕಾಣಿಸಿಕೊಂಡು 38 ತಿಂಗಳಾಗಿವೆ. ಎರಡೂವರೆ ವರ್ಷಗಳಿಂದ ಅವರ ನಟನೆಯ ‘ಮಾರ್ಟಿನ್’ ಸಿನಿಮಾದ ಕೆಲಸಗಳು ಸಾಗುತ್ತಲೇ ಇದೆ. ಆದರೆ ಇನ್ನೂ ರಿಲೀಸ್ ಡೇಟ್ ಘೋಷಣೆ ಆಗಿಲ್ಲ. ಅತ್ತ ಕೆಡಿ ಸಿನಿಮಾದ ಕೆಲಸಗಳನ್ನು ಕೂಡ ಧ್ರುವ ಸರ್ಜಾ ಬಹುತೇಕ ಮುಗಿಸಿದ್ದಾರೆ.

2021ರಲ್ಲಿ ಸಲಗ ಸಿನಿಮಾದಲ್ಲಿ ಭರ್ಜರಿ ಗೆಲುವನ್ನು ಕಂಡಿದ್ದು ನಟ ದುನಿಯಾ ವಿಜಯ್. ಆ ಸಿನಿಮಾ ತೆರೆಕಂಡು 30 ತಿಂಗಳಾಗಿವೆ. ಆದರೆ, ಈವರೆಗೂ ಅವರ ಇನ್ನೊಂದು ಸಿನಿಮಾ ತೆರೆಕಂಡಿಲ್ಲ. ಕಳೆದ ವರ್ಷ ತೆಲುಗಿನ ವೀರ ನರಸಿಂಹ ರೆಡ್ಡಿ ಸಿನಿಮಾದಲ್ಲಿ ವಿಜಯ್ ಅಬ್ಬರಿಸದ್ದರು. ಆದರೆ ಅದು ತೆಲುಗು ಸಿನಿಮಾ. ಕನ್ನಡದಲ್ಲಿ ಭೀಮ ಸಿನಿಮಾವನ್ನು ನಿರ್ದೇಶಿಸಿ, ಅದನ್ನು ತೆರೆಗೆ ತರುವುದಕ್ಕೆ ವಿಜಯ್ ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೆ ರಿಲೀಸ್ ಡೇಟ್ ಇನ್ನೂ ಘೋಷಣೆ ಆಗಿಲ್ಲ ಎಂಬುದು ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ.

ರಿಯಲ್ ಸ್ಟಾರ್‌ ಉಪೇಂದ್ರ ಅವರ ಕಬ್ಜ ರಿಲೀಸ್ ಆಗಿ 13 ತಿಂಗಳಾಗಿವೆ. ಆದಾದ ಮೇಲೆ ಅವರ ಮುಂದಿನ ಸಿನಿಮಾ ‘ಯುಐ’ಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅದರ ಬಿಡುಗಡೆ ಯಾವಾಗ ಅನ್ನೋದು ಇನ್ನೂ ಗೌಪ್ಯವಾಗಿಯೇ ಇದೆ. ಇನ್ನು, ಕಾಂತಾರದಂತಹ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ರಿಷಬ್ ಶೆಟ್ಟಿ, ಈಗ ಅದರ ಪ್ರೀಕ್ವೆಲ್‌ನಲ್ಲಿ ಬ್ಯುಸಿ. ಕಾಂತಾರ ತೆರೆಕಂಡು 19 ತಿಂಗಳಾಗಿವೆ. ಇನ್ನು, ಕಾಂತಾರ ಪ್ರೀಕ್ವೆಲ್ ಬರುವುದಕ್ಕೆ ಇನ್ನೂ 10-15 ತಿಂಗಳು ಬೇಕಾಗಬಹುದು.

ಇದನ್ನೂ ಓದಿ : ಬೆಂಗಳೂರು : ರೌಡಿಶೀಟರ್ ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆಯೇ ಹ*ಲ್ಲೆ – ಆರೋಪಿಗೆ ಗುಂಡೇಟು..!

Leave a Comment

DG Ad

RELATED LATEST NEWS

Top Headlines

BTV mega exclusive : ಬೆಂಗಳೂರು ದಕ್ಷಿಣ ಎಸಿ ರಜನಿಕಾಂತ್ ವಿರುದ್ಧ ಭ್ರಷ್ಟಾಚಾರ ಆರೋಪ..!

ಬೆಂಗಳೂರು : ಜಮೀನು ಖಾತಾ ಮಾಡಿಕೊಡಲು ಫೋನ್​ ಪೇ / ಆನ್ ಲೈನ್ ಮೂಲಕ ಅಧಿಕಾರಿಯೊಬ್ಬರು ಲಂಚ ವಸೂಲಿ ಮಾಡಿರುವ ಆರೋಪವೊಂದು ಕೇಳಿದೆ ಬಂದಿದೆ. ಬೆಂಗಳೂರು ದಕ್ಷಿಣ

Live Cricket

Add Your Heading Text Here