IPL 2026ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈ-ವೋಲ್ಟೇಜ್ ಕದನ ನಡೆಯಿತು. ಈ ಪಂದ್ಯದಲ್ಲಿ ಡೇವಿಡ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಅವರು ಹೊಡೆದ ಸಿಕ್ಸರ್ ಸ್ಟೇಡಿಯಂ ದಾಟಿ ನೇರವಾಗಿ ರಸ್ತೆಗೆ ಬಿದ್ದಿದೆ. ಈ ವೇಳೆ ಹೊರಗಡೆ ಟಿಕೆಟ್ ಸಿಗದೆ ಬೇಸರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಬಾಲ್ ಸಿಕ್ಕಿದ್ದು, ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ನಿನ್ನೆಯ ಪಂದ್ಯದಲ್ಲಿ RCB ಸಿಕ್ಕಾಪಟ್ಟೆ ಅಬ್ಬರಿಸಿದ್ದು, ಅದರಲ್ಲೂ ಟೀಂ ಡೇವಿಡ್ ಮೈದಾನಕ್ಕಿಳಿಯುತ್ತಿದ್ದಂತೆ ಪಂದ್ಯದ ಚಿತ್ರಣವೇ ಬದಲಾಯ್ತು. ಕೇವಲ 25 ಎಸೆತಗಳಲ್ಲಿ 70 ರನ್ ಚಚ್ಚಿದ ಡೇವಿಡ್, ಬರೋಬ್ಬರಿ 8 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ರು. ಅದರಲ್ಲಿ ಒಂದು ಸ್ಟೇಡಿಯಂ ದಾಟಿ ಆಚೆ ಬಂದಿತ್ತು.

ಪ್ರತಿ ಸಲ RCB ಮ್ಯಾಚ್ ಇದ್ದಾಗ ಸಾವಿರಾರು ಜನಕ್ಕೆ ಟಿಕೆಟ್ ಸಿಗಲ್ಲ. ನಿನ್ನೆ ಕೂಡ ಒಂದಷ್ಟು ಹುಡುಗರ ಗುಂಪು ಟಿಕೆಟ್ ಸಿಗದೆ ಮೈದಾನದ ಹೊರಗಡೆ ನಿಂತು ಮೊಬೈಲ್‌ನಲ್ಲಿ ಸ್ಕೋರ್ ನೋಡ್ತಾ ಅಬ್ಬರ ಕೇಳಿಸಿಕೊಂಡು ಎಂಜಾಯ್ ಮಾಡ್ತಿದ್ರು. ಸ್ಟೇಡಿಯಂ ಒಳಗಡೆ ಹೋಗೋಕೆ ಆಗ್ಲಿಲ್ಲ ಅಂತ ಅವರಿಗೆ ಸಣ್ಣ ಬೇಸರ ಇತ್ತು. ಪಂದ್ಯದ ಕೊನೆಯ ಓವರ್‌ಗಳಲ್ಲಿ ಟಿಮ್ ಡೇವಿಡ್ ಬ್ಯಾಟ್ ಬೀಸಿದ ಬಾಲ್ ಸ್ಟೇಡಿಯಂ ದಾಟಿ ನೇರವಾಗಿ ರಸ್ತೆಗೆ ಬಂತು. ಸರಿಯಾಗಿ ಆ ರಸ್ತೆಯಲ್ಲೇ ನಿಂತು ವಿಡಿಯೋ ಮಾಡ್ತಿದ್ದ ಹುಡುಗರ ಪಕ್ಕದಲ್ಲೇ ಬಾಲ್ ಬಿದ್ದಿದೆ. ತಕ್ಷಣ ಓಡಿ ಬಂದ ಆ ಯುವಕರು ಬಾಲ್ ಕೈಗೆತ್ತಿಕೊಂಡು ಕುಣಿದು ಕುಪ್ಪಳಿಸಿದ್ದಾರೆ.

ನಮಗೆ ಒಳಗಡೆ ಹೋಗೋಕೆ ಟಿಕೆಟ್ ಸಿಗಲಿಲ್ಲ, ಆದ್ರೆ ಸಾಕ್ಷಾತ್ ಟಿಮ್ ಡೇವಿಡ್ ಅವರೇ ನಮಗೆ ಈ ಬಾಲ್ ಕಳಿಸಿಕೊಟ್ಟಿದ್ದಾರೆ. ಇವತ್ತು ಇಲ್ಲಿಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು ಅಂತ ಯುವಕರು ವಿಡಿಯೋದಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.









