18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 22ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದೊಂದಿಗೆ ಐಪಿಎಲ್ ಹಬ್ಬ ಆರಂಭವಾಗಲಿದೆ.

ಈ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ನೆಟ್ಸ್ನಲ್ಲಿ ಅಭ್ಯಾಸ ಶುರುಮಾಡಿಕೊಂಡಿದೆ. ಎರಡು ತಂಡದ ಆಟಗಾರರು ತಮ್ಮ ತಮ್ಮ ಟೀಂ ಕ್ಯಾಂಪ್ ಸೇರಿಕೊಂಡಿದ್ದು, ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇತ್ತ ರಜತ್ ಪಾಟಿದರ್ ನಾಯಕತ್ವದಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ RCB ಕೂಡ ಕಳೆದ ಕೆಲವು ದಿನಗಳಿಂದ ತವರು ಮನೆ ಬೆಂಗಳೂರಲ್ಲಿ ಅಭ್ಯಾಸ ಶಿಬಿರ ನಡೆಸುತ್ತಿದೆ. ಇದೀಗ ಈ ಶಿಬಿರಕ್ಕೆ ತಂಡದ ಬ್ಯಾಟಿಂಗ್ ಜೀವಾಳ ವಿರಾಟ್ ಕೊಹ್ಲಿ ಸೇರಿಕೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯನ್ನು ಆಡುವ ಸಲುವಾಗಿ ಟೀಂ ಇಂಡಿಯಾದೊಂದಿಗೆ ದುಬೈನಲ್ಲಿದ್ದ ವಿರಾಟ್ ಕೊಹ್ಲಿ ಕೆಲವೇ ದಿನಗಳ ಹಿಂದೆ ಭಾರತಕ್ಕೆ ಬಂದಿಳಿದಿದ್ದರು. ಇತ್ತ ಕೊಹ್ಲಿ ಅನುಪಸ್ಥಿತಿಯಲ್ಲಿ ಆರ್ಸಿಬಿ, ಉಳಿದ ಆಟಗಾರರೊಂದಿಗೆ ಅಭ್ಯಾಸ ಶುರು ಮಾಡಿತ್ತು.

ತಂಡದ ನೂತನ ನಾಯಕ ರಜತ್ ಪಾಟಿದರ್ನಿಂದ ಹಿಡಿದು, ವಿದೇಶಿ ಆಟಗಾರರು ಸೇರಿದಂತೆ ತಂಡದ ಉಳಿದ ಆಟಗಾರರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆದರೆ ವಿರಾಟ್ ಕೊಹ್ಲಿ ಅನುಪಸ್ಥಿತಿ ಮಾತ್ರ ತಂಡದಲ್ಲಿ ಎದ್ದು ಕಾಣುತ್ತಿತ್ತು.

ಆದರೀಗ ಮೊದಲ ಪಂದ್ಯಕ್ಕೆ ಒಂದು ವಾರ ಉಳಿದಿರುವ ಬೆನ್ನಲ್ಲೇ ರೆಡ್ ಆರ್ಮಿಯನ್ನು ಕಿಂಗ್ ಕೊಹ್ಲಿ ಸೇರಿಡಿದ್ದಾರೆ. ತಂಡದ ಮಾಜಿ ನಾಯಕ ಹಾಗೂ ತಂಡದ ಜೀವಾಳವಾಗಿರುವ ವಿರಾಟ್ ಕೊಹ್ಲಿಯ ಆಗಮನದ ವಿಡಿಯೋವನ್ನು ಆರ್ಸಿಬಿ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

