ಮಂಡ್ಯ : ಬೆಳ್ಳಂಬೆಳಗ್ಗೆ ಮಂಡ್ಯದ ಮಳವಳ್ಳಿ ಪಟ್ಟಣದ ಕೊಳ್ಳೆಗಾಲ ರಸ್ತೆಯ ಕಣಿಗಲ್ ಹಳ್ಳದ ಬಳಿ ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಶಾಲೆಗೆ ಬಿಡಲು ಹೋಗುತ್ತಿದ್ದಾಗ, ಎಳನೀರು ತುಂಬಿಕೊಂಡು ಬರುತ್ತಿದ್ದ ಬುಲೊರೋ ವಾಹನಕ್ಕೆ ಸ್ಕೂಟರ್ ಡಿಕ್ಕಿಯಾಗಿದೆ. ಪರಿಣಾಮ ತಾಯಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಂದೂರು ಗ್ರಾಮದ 39 ವರ್ಷದ ಶಿಲ್ಪ ಮೃತ ಮಹಿಳೆ.

ತಾಯಿ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆಯ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಸಾವು ಕಂಡಿದ್ದರೆ, ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ.

ಮಕ್ಕಳಾದ 7 ವರ್ಷದ ಅನನ್ಯ ಹಾಗೂ 5 ವರ್ಷದ ಮಾನ್ಯಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮಹಿಳೆಯ ಶವವನ್ನು ಮಳವಳ್ಳಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
