ಮಂಗಳೂರು : ಖ್ಯಾತ ಡ್ಯಾನ್ಸರ್, ನಟ ಪ್ರಭುದೇವ ಅವರು ಕುಟುಂಬ ಸಮೇತರಾಗಿ ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಳದ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

ಪ್ರಭುದೇವ ಹಾಗೂ ಅವರ ಪತ್ನಿ, ಕುಟುಂಬ ವರ್ಗದವರು ದೇವರಿಗೆ ಮಹಾಭಿಷೇಕ ಪೂಜೆಯನ್ನು ನೆರವೇರಿಸಿ ಮುಖ್ಯ ಅರ್ಚಕರಿಂದ ಪ್ರಸಾದ ಸ್ವೀಕರಿಸಿದ್ದಾರೆ.

ಬಳಿಕ ದೇವಳದ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಪ್ರಭುದೇವ ದಂಪತಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್, ಮುಂತಾದವರು ಉಪಸ್ಥಿತರಿದ್ದರು.

ನಂತರ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿದ ಪ್ರಭುದೇವ ದಂಪತಿ, ಅಲ್ಲಿನ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಾದ, ಮಂತ್ರಾಕ್ಷತೆ ಪಡೆದಿದ್ದಾರೆ.

ಇತ್ತೀಚೆಗಷ್ಟೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಭೇಟಿ ನೀಡಿದ್ದರು. ದೇವಸ್ಥಾನದಲ್ಲಿ ಆಶ್ಲೇಷಾ ಬಲಿ ಪೂಜೆಯಲ್ಲಿ ಕತ್ರಿನಾ ಭಾಗಿ ಆಗಿದ್ದರು. ಆ ಬಳಿಕ ಅವರು ಸರ್ಪ ಸಂಸ್ಕಾರ ಸೇವೆ, ನಾಗ ಪ್ರತಿಷ್ಠಾ ಸೇವೆಯಲ್ಲಿ ಭಾಗವಹಿಸಿದ್ದರು. ಸಂತಾನ, ವ್ಯವಹಾರಿಕ, ಕೌಟುಂಬಿಕ ಜೀವನದ ಒಳಿತಿಗಾಗಿ ವಿವಿಧ ಪೂಜೆಗಳನ್ನು ಮಾಡಿಸಿದ್ದರು.
