ಬೆಂಗಳೂರು : ದುಬೈನಿಂದ ಚಿನ್ನ ಕಳ್ಳ ಸಾಗಾಟದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಕೇಸ್ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಡಿಆರ್‌ಐ, ಸಿಬಿಐ, ತನಿಖೆಯನ್ನು ಎದುರಿಸ್ತಿರುವ ನಟಿಗೆ ಇದೀಗ ಜಾರಿ ನಿರ್ದೇಶನಾಲಯದ (ED) ಸಂಕಷ್ಟ ಎದುರಾಗಿದೆ.
ಬೆಂಗಳೂರಿನ ಲ್ಯಾವಲೇ ರಸ್ತೆಯಲ್ಲಿರುವ ರನ್ಯಾ ರಾವ್ ಮನೆ ಮೇಲೆ ನಿನ್ನೆ ED ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ನೋವಾ ಕಾರಿನಲ್ಲಿ ಬಂದ ಒಂಭತ್ತು ಅಧಿಕಾರಿಗಳು ಮನೆಯೊಳಗೆ ತೆರಳಿ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ. PMLA ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಲಾಗಿದ್ದು, ಅಕ್ರಮವಾಗಿ ಮನಿ ಲಾಂಡರಿಂಗ್ ಆಗಿರುವುದು ಮೇಲ್ನೋಟಕ್ಕೆ ಪತ್ತೆ ಆಗಿದೆ. ಗೋಲ್ಡ್ ಸ್ಮಗ್ಲಿಂಗ್ಗೆ ಹವಾಲಾ, ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಡಿಆರ್‌ಐ, ಸಿಬಿಐ ಅಧಿಕಾರಿಗಳ ದಾಳಿ ಬೆನ್ನಲ್ಲೆ ರನ್ಯಾ ಫ್ಲಾಟ್ ಮೇಲೆ ಇಡಿ ದಾಳಿ ನಡೆಸಿದ್ದು, ನಟಿಗೆ ಭಾರೀ ಸಂಕಷ್ಟ ಎದುರಾಗಿದೆ. ನಿನ್ನೆ ಬೆಳಗ್ಗೆ ಆರು ಘಂಟೆ ಸುಮಾರಿಗೆ ದಾಳಿ ನಡೆಸಿದ್ದ ED ಅಧಿಕಾರಿಗಳು, ರಾತ್ರಿ ವೇಳೆ ದಾಳಿ ಅಂತ್ಯ ಮಾಡಿದೆ. ಸತತ 15 ಗಂಟೆಗಳ ಕಾಲ ಶೋಧಕಾರ್ಯ ನಡೆಸಿ ನಾಲ್ಕು ಬ್ಯಾಗ್ಗಳಲ್ಲಿ ದಾಖಲೆಗಳನ್ನ ಅಧಿಕಾರಿಗಳು ಹೊತ್ತೊಯ್ದಿದ್ದಾರೆ. ಹಾಗೆಯೇ ರನ್ಯಾ ಆಪ್ತರ ಮನೆ, ಕಚೇರಿ ಸೇರಿ ನಾಲ್ಕಕ್ಕೂ ಅಧಿಕ ಸ್ಥಳಗಳಲ್ಲಿ ಮೇಲೆ ದಾಳಿ ನಡೆಸಿ ED ಪರಿಶೀಲನೆ ನಡೆಸಿದೆ. ಎರಡು ಇನ್ನೋವಾ ಕಾರುಗಳಲ್ಲಿ ಬಂದಿದ್ದ ಒಂಭತ್ತು ಮಂದಿ ED ಅಧಿಕಾರಿಗಳು, CISF ಪೊಲೀಸ್ ಭದ್ರತೆಯೊಂದಿಗೆ ಶೋಧ ಕಾರ್ಯ ಮಾಡಿದ್ದಾರೆ.

ಡಿಆರ್‌ಐ ವಶದಲ್ಲಿರುವ ರನ್ಯಾ ಗೆಳೆಯ ತರುಣ್ ರಾಜ್ ನಿವಾಸ, ಕೋರಮಂಗಲದಲ್ಲಿನ ವೈಟ್‌ಗೋಲ್ಡ್ ಸಂಸ್ಥೆ ಟಿ.ಜೆ.ರಾವ್ ನಿವಾಸ ಸೇರಿ ಇತರೆಡೆ ಕೂಡ ED ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ರನ್ಯಾ ರಾವ್ ವಿಮಾನದ ಟಿಕೆಟ್ ಬುಕ್ ಮಾಡಿದವರು ಮತ್ತು ವಿದೇಶ ಪ್ರವಾಸಕ್ಕೆ ನೆರವು ನೀಡಿದವರು ಮತ್ತು ವ್ಯವಹಾರದಲ್ಲಿ ಪಾಲುದಾರರಾಗಿರುವವರಿಗೂ ED ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇಂದು ನಟಿ ರನ್ಯಾ ರಾವ್ ಬೇಲ್ ಭವಿಷ್ಯ : ಕೆಜಿಗಟ್ಟಲೇ ಚಿನ್ನವನ್ನ ಮೈಮೇಲೆ ಹೊತ್ತು ತಂದಿದ್ದ ರನ್ಯಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೆರೆವಾಸದಲ್ಲಿ ಇರುವಾಗ್ಲೇ ರನ್ಯಾ ಜಾಮೀನಿಗೆ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೊನ್ನೆ ಕೋರ್ಟ್‌ನಲ್ಲಿ ವಾದ-ಪ್ರತಿವಾದ ಮುಗಿದಿದೆ. ರನ್ಯಾ ಪರ ಕಿರಣ್ ಜವಳಿ ವಾದ ಮಂಡಿಸಿದ್ರೆ, ಡಿಆರ್‌ಐ ಪರ ಮಧುರಾವ್ ತಮ್ಮ ವಾದ ಮುಂದಿಟ್ರು. ಸದ್ಯ ಎರಡೂ ಕಡೆಯ ವಾದವನ್ನ ಆಲಿಸಿದ ಕೋರ್ಟ್, ಇವತ್ತಿಗೆ ತೀರ್ಪು ಕಾಯ್ದಿರಿಸಿದೆ. ಹೀಗಾಗಿ ಇವತ್ತು ರನ್ಯಾ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಲಿದೆ.
