ಗೋಲ್ಡ್ ಸ್ಮಗ್ಲಿಂಗ್​ ಕೇಸ್​ – ನಟಿ ರನ್ಯಾ ರಾವ್ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕೋರ್ಟ್ ನಿರ್ಬಂಧ!

ಬೆಂಗಳೂರು : ದುಬೈನಿಂದ 14 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಬೆಂಗಳೂರಿಗೆ ಸಾಗಿಸಿರುವ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ವಿರುದ್ಧ ಯಾವುದೇ ರೀತಿಯ ಮಾನಹಾನಿ, ಸುಳ್ಳು ಮತ್ತು ಆಧಾರರಹಿತ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನ್ಯಾಯಾಲಯ ನಿರ್ಬಂಧಕಾಜ್ಞೆ ಹೊರಡಿಸಿದೆ. ಜೊತೆಗೆ, ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದೆ.

ರನ್ಯಾ ರಾವ್ ಅವರ ತಾಯಿ ಹೆಚ್.ಪಿ.ರೋಹಿಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ 40ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಎನ್‌. ವೀಣಾ ಅವರು ಈ ಆದೇಶ ನೀಡಿದ್ದಾರೆ.

ಮಾಧ್ಯಮಗಳು ಪ್ರಕರಣದ ಸಂಬಂಧ ರಂಜನಾತ್ಮಕ ಸುದ್ದಿ ಪ್ರಕಟಿಸುವುದರಿಂದ ರನ್ಯಾ ಅವರಿಗೆ ಸಂವಿಧಾನದ 21ನೇ ವಿಧಿಯಡಿ ಲಭ್ಯವಾಗಿರುವ ಹಕ್ಕು ಉಲ್ಲಂಘನೆಯಾಗಲಿದೆ. ಮಾಧ್ಯಮಗಳ ವರದಿಗಾರಿಕೆಯಿಂದ ತಪ್ಪು ಭಾವನೆ ಸೃಷ್ಟಿಯಾಗಿದ್ದು, ರನ್ಯಾ ಮೇಲೆ ಸಾರ್ವಜನಿಕವಾಗಿ ಪೂರ್ವಾಗ್ರಹಪೀಡಿತ ಅಭಿಪ್ರಾಯ ರೂಪುಗೊಳ್ಳಲಿದೆ ಎಂದು ರನ್ಯಾ ತಾಯಿ ಆಕ್ಷೇಪಿಸಿದ್ದಾರೆ.

ಇನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಆಧರಿಸಿದ ಮಾಧ್ಯಮ ವರದಿಗಳನ್ನು ಪರಿಶೀಲಿಸಿದ ನ್ಯಾಯಾಲಯವು ಮಾಧ್ಯಮ ವರದಿಗಳು ನೈತಿಕ ಮಿತಿಯನ್ನು ಮೀರಿದ್ದು, ಅವು ಆರೋಪಿಯ ಸಮರ್ಥನೆಗೆ ಪೂರ್ವಾಗ್ರಹ ಉಂಟು ಮಾಡಬಹುದು ಎಂದಿದೆ. ಹಾದಿ ತಪ್ಪಿಸುವ ತಲೆಬರಹಗಳು, ವಿಜೃಂಭಿತ ಮತ್ತು ಊಹಾತ್ಮಕ ವರದಿಗಳಿಂದ ಮಾಧ್ಯಮ ವಿಚಾರಣೆ ವಾತಾವರಣ ಸೃಷ್ಟಿಯಾಗಿದ್ದು, ರನ್ಯಾ ವೈಯಕ್ತಿಕ ಪ್ರಾಮಾಣಿಕತೆಗೆ ಹಾನಿ ಮಾಡುವ ಸಂಭವವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Btv Kannada
Author: Btv Kannada

Leave a Comment

Read More

01:47