ಬೆಂಗಳೂರು : ಡಿಸಿಎಂ ಡಿ.ಕೆ ಶಿವಕುಮಾರ್ ಔತಣ ಕೂಟ ಏರ್ಪಡಿಸಿದ ಹಿನ್ನೆಲೆ ನಿನ್ನೆ ಸಂಜೆ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನ ಇವತ್ತಿಗೆ ಮುಂದೂಡಿಕೆ ಮಾಡಲಾಗಿದೆ.
ನಿನ್ನೆ ಸಂಜೆ 7 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯನ್ನ ಆಯೋಜಿಸಲಾಗಿತ್ತು. ಆದರೆ ಇಂದು ಸಂಜೆ 6 ಗಂಟೆಗೆ ಸಭೆಯನ್ನ ಮುಂದೂಡಿದ್ದು, ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳ ನೇಮಕದ ಬಗ್ಗೆ ಚರ್ಚೆ ನಡೆಯಲಿದೆ. ಬಳಿಕ ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯ ವ್ಯಾಪ್ತಿಯನ್ನು ಟೈಟ್ ಮಾಡುವ ಸಾಧ್ಯತೆಯಿದೆ. ಇನ್ನು ಸ್ಥಳೀಯ ಮಟ್ಟದ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆಯಲಿದ್ದು, ಹಲವು ಅಭಿವೃದ್ಧಿ ಯೋಜನೆಗಳಿಗೆ ಸಂಪುಟ ಇಂದು ಒಪ್ಪಿಗೆ ನೀಡುವ ಸಾಧ್ಯತೆಯಿದೆ.
ಸರ್ಕಾರದ ವಿರುದ್ಧ ಪದೇ ಪದೇ ಆರೋಪಗಳ ಸದ್ದು ಕೇಳಿಬರುತ್ತಿದೆ. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸುವಂತೆಯೂ ಸಹೋದ್ಯೋಗಿಗಳಿಗೆ ಸಿಎಂ ಕಿವಿ ಮಾತು ಹೇಳಲಿದ್ದಾರೆ. ಇನ್ನು ನಟಿ ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಲಿಂಕ್ ಆರೋಪದ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ಈ ವೇಳೆ ಪೊಲಿಸ್ ಅಧಿಕಾರಗಳ ಕಾರ್ಯ ವೈಖರಿ ಹಾಗೂ 40% ಕಮಿಷನ್ ಗುತ್ತಿಗೆದಾರ ಆರೋಪ ವರದಿ ಕೊಟ್ಟ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಬಗ್ಗೆ ಸಿಎಂ ಸಿದ್ದು ಚರ್ಚೆ ನಡೆಸಲಿದ್ದಾರೆ.
