ಜನವರಿಯಿಂದ ಇಲ್ಲಿಯವರೆಗೆ ಭಾರತಕ್ಕೆ 38.98 ಕೆಜಿ ಚಿನ್ನ ಕಳ್ಳಸಾಗಣೆ – DRI ತನಿಖೆಯಲ್ಲಿ ಸ್ಪೋಟಕ‌ ಮಾಹಿತಿ ಬಹಿರಂಗ!

ಬೆಂಗಳೂರು : ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ನಟಿ ರನ್ಯಾ ರಾವ್ ಜೈಲು ಸೇರಿದ್ದಾರೆ. ​ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ತಿದೆ. ತನಿಖೆ ವೇಳೆ ಅನೇಕ ವಿಚಾರಗಳು ಬಯಲಾಗಿದೆ ಎನ್ನಲಾಗ್ತಿದೆ. ಇದೀಗ DRI ತನಿಖೆಯಲ್ಲಿ ಮತ್ತೊಂದು ಸ್ಪೋಟಕ‌ ಮಾಹಿತಿ ಬಹಿರಂಗವಾಗಿದೆ. 

ರನ್ಯಾ ರಾವ್ ಅವರ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಡಿಆರ್‌ಐ ತನಿಖೆ ಮತ್ತಷ್ಟು ಹೊಸ ವಿಷಯಗಳನ್ನು ಬೆಳಕಿಗೆ ತಂದಿದೆ. ಜನವರಿ ಇಲ್ಲಿವರೆಗೂ ದುಬೈನಿಂದ ಭಾರತಕ್ಕೆ ಸುಮಾರು 38.98 ಕೆಜಿ ಚಿನ್ನ ಕಳ್ಳಸಾಗಣೆ ಆಗಿರುವುದು ಬೆಳಕಿಗೆ ಬಂದಿದೆ.

ಈ ಚಿನ್ನವನ್ನು ಬೆಂಗಳೂರು ಮತ್ತು ಮುಂಬೈ ವಿಮಾನ ನಿಲ್ದಾಣಗಳಿಗೆ ತರಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ DRI ಅಧಿಕಾರಿಗಳು ಈಗಾಗಲೇ ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ DRI ಪತ್ರ ಬರೆದಿದೆ.

ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಬೆಂಗಳೂರು ಮತ್ತು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ವಿಚಾರಣೆ ನಡೆಸುತ್ತಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಸಹಾಯವಿಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನ ಕಳ್ಳಸಾಗಣೆ ಸಾಧ್ಯವಿಲ್ಲ ಎಂಬುದು DRI ಅನುಮಾನವಾಗಿದೆ.

2024ರಲ್ಲಿ ದಾಖಲಾದ ಇದೇ ರೀತಿಯ ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಸಿಬಿಐ ಅಧಿಕಾರಿಗಳು ಕಸ್ಟಮ್ಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಸಿಬಿಐ ದಾಖಲಿಸಿರುವ ಎಫ್ಐಆರ್ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿರುವ ಕಸ್ಟಮ್ಸ್ ಅಧಿಕಾರಿಗಳು, ಬಂಧಿತ ಆರೋಪಿಗಳು, ಶಂಕಿತರು, ಉದ್ಯಮಿಗಳು, ಚಿನ್ನದ ವ್ಯಾಪಾರಿಗಳು ಹಾಗೂ ಅವರ ಕಚೇರಿಗಳ ಮೇಲೆ ದಾಳಿ ನಡೆಸಿದೆ.

Btv Kannada
Author: Btv Kannada

Leave a Comment

Read More

01:47