ದೇಶದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಡುವಿನ ಮುಸುಕಿನ ಗುದ್ದಾಟ, ಅಸಮಾಧಾನ ಇದೀಗ ತೀವ್ರವಾಗಿ ಭುಗಿಲೇಳುತ್ತಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕ್ಷೇತ್ರ ಪುನರ್ ವಿಂಗಡಣೆ ವಿಚಾರ. ಜನಸಂಖ್ಯೆಯ ಆಧಾರದ ಮೇಲೆ ಎರಡು ಹಂತಗಳಲ್ಲಿ ಸ್ಥಾನಗಳ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ ಎನ್ನಲಾಗ್ತಿದೆ.

ಮಾರ್ಚ್ 22 ರಂದು ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಚೆನ್ನೈನಲ್ಲಿ ಜಂಟಿ ಕ್ರಿಯಾ ಸಮಿತಿಯ ಸಭೆ ನಡೆಯಲಿದೆ. ತಮಿಳುನಾಡಿನ ಹೋರಾಟಕ್ಕೆ ಕರ್ನಾಟಕವೂ ಬೆಂಬಲ ಸೂಚಿಸಿದ್ದು ಮಹತ್ವದ ಸಭೆಯಲ್ಲಿ ಕರ್ನಾಟಕ ಸರ್ಕಾರವೂ ಭಾಗಿಯಾಗಲಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಸಾಥ್ ನೀಡಿದ್ದು, ಸರ್ಕಾರದ ವತಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ರಾಜ್ಯ ಸ್ವಾಯತ್ತತೆ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ನಿರ್ಣಾಯಕ ವಿಷಯಗಳ ಕುರಿತು ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕೆ ಸ್ಟಾಲಿನ್ ಅವರ ಪತ್ರ ನನಗೆ ತಲುಪಿದೆ. ಪೂರ್ವ ಬದ್ಧತೆಗಳಿಂದಾಗಿ ಮಾರ್ಚ್ 22 ರಂದು ನಡೆಯುವ ಸಭೆಗೆ ಹಾಜರಾಗಲು ನನಗೆ ಸಾಧ್ಯವಾಗದಿದ್ದರೂ, ಕರ್ನಾಟಕವನ್ನು ಪ್ರತಿನಿಧಿಸಲು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಕೇಳಿಕೊಂಡಿದ್ದೇನೆ. ಒಕ್ಕೂಟ ತತ್ವಗಳು ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

