ಬೆಂಗಳೂರು : ದುಬೈನಿಂದ 14 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಬೆಂಗಳೂರಿಗೆ ಸಾಗಿಸಿರುವ ಆರೋಪ ಪ್ರಕರಣದಲ್ಲಿ ನಟಿ ರನ್ಯಾ ರಾವ್ನ್ನು ಬಂಧಿಸಲಾಗಿದೆ. ರನ್ಯಾ ಅವರ ಪ್ರಕರಣದಲ್ಲಿ ಪೊಲೀಸ್ ಪ್ರೊಟೋಕಾಲ್ ಉಲ್ಲಂಘನೆ ಆಗಿದೆ ಎಂದು ವರದಿ ಆದ ಬೆನ್ನಲ್ಲೇ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಬಳಿಕ ಆ ಆದೇಶವನ್ನು ಕೇವಲ 24 ಗಂಟೆಯಲ್ಲಿ ಹಿಂಪಡೆಯಲಾಗಿದೆ. ಈ ಬೆಳವಣಿಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಈ ಬಗ್ಗೆ ಇದೀಗ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದು, ಹಬ್ಬಿದ ವಂದತಿಗಳಿಗೆ ತೆರೆ ಎಳೆದಿದ್ದಾರೆ. ‘ಪೊಲೀಸ್ ಪ್ರೊಟೊಕಾಲ್ ಉಲ್ಲಂಘನೆ ಬಗ್ಗೆ ತಿಳಿದುಕೊಳ್ಳಲು ನಾನು ಸಿಐಡಿ ತನಿಖೆಗೆ ಆದೇಶಿಸಿದೆ. ಅಷ್ಟರೊಳಗಾಗಲೇ ಸಿಎಂ ಕಚೇರಿಯಿಂದ ಮೇಲ್ಮಟ್ಟದ(dpr) ತನಿಖೆಗೆ ಆದೇಶ ನೀಡಲಾಗಿತ್ತು. ಒಂದೇ ವಿಚಾರಕ್ಕೆ ಎರಡು ಕಡೆ ತನಿಖೆ ಆಗೋದು ಬೇಡ ಎಂಬ ಕಾರಣಕ್ಕೆ ನಾವು ಸಿಐಡಿ ತನಿಖೆಯನ್ನು ಹಿಂಪಡೆದೆವು’ ಎಂದು ಹೇಳಿದ್ದಾರೆ.
ಇನ್ನು ಈ ಪ್ರಕರಣದ ಹಿಂದೆ ಪ್ರಭಾವಿ ರಾಜಕಾರಣಿ ಇದ್ದಾರೆ ಎಂಬ ಮಾತುಗಳು ಕೇಳಿ ಬಂದ ಕಾರಣದಿಂದಲೇ ಸರ್ಕಾರದ ಮೇಲೆ ಒತ್ತಡ ಹೇರಲಾಯಿತು ಮತ್ತು ಸರ್ಕಾರ ಸಿಐಡಿ ತನಿಖೆ ಆದೇಶವನ್ನು ಹಿಂದಕ್ಕೆ ಪಡೆಯಿತು ಎನ್ನುವ ಮಾತು ಕೇಳಿ ಬಂದಿದ್ದವು. ಈ ಬಗ್ಗೆಯೂ ಪರಮೇಶ್ವರ್ ಮಾತನಾಡಿ, ‘ತನಿಖೆಗೆ ಆದೇಶ ನೀಡಲೂ ಯಾರು ಒತ್ತಡ ಹೇರಿರಲಿಲ್ಲ. ಹಿಂದಕ್ಕೆ ಪಡೆಯಲೂ ಯಾರೂ ಒತ್ತಡ ಹೇರಿಲ್ಲ. ಎರಡು ತನಿಖೆ ಬೇಡ ಎಂಬ ಕಾರಣಕ್ಕೆ ನಾವು ಹಿಂಪಡೆದಿದ್ದೇವೆ ಅಷ್ಟೇ. ಇಲ್ಲಿ ಯಾವುದೇ ಗೊಂದಲ ಬೇಡ’ ಎಂದು ಪರಮೇಶ್ವರ್ ಹೇಳಿದ್ದಾರೆ.
ಪರಮೇಶ್ವರ್ ಅವರು ಈ ಮೊದಲು ರನ್ಯಾ ರಾವ್ ಮದುವೆಗೆ ಹೋಗಿದ್ದ ಫೋಟೋ ವೈರಲ್ ಆಗಿತ್ತು. ಈ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ಪರಮೇಶ್ವರ್, ‘ನಾವು ಸಾವಿರ ಮದುವೆಗೆ ಹೋಗ್ತಾ ಇರ್ತೀವಿ’ ಎಂದಷ್ಟೇ ಹೇಳಿದ್ದಾರೆ.
